ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಲು 50 ಕೋ.ರೂ. ಅನುದಾನ : ಶಾಸಕ ಜೆ.ಆರ್.ಲೋಬೊ

Update: 2017-09-29 06:21 GMT

ಮಂಗಳೂರು, ಸೆ. 29: ನಗರದಲ್ಲಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸುವ ಮೂಲಕ ವಿದ್ಯುತ್ ತಂತಿಗಳು ತೂಗಾಡುವುದನ್ನು ತಪ್ಪಿಸಿ ನಗರವನ್ನು ಸುಂದರಗೊಳಿಸಲು 50 ಕೋ.ರೂ.ಅನುದಾನ ಬಳಸಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ತನ್ನ ಕಚೇರಿಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮೆಸ್ಕಾಂ ಸಲಹಾ ಸಮಿತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಮಂಗಳೂರಿಗೆ ಪ್ರಾಯೋಗಿಕವಾಗಿ ಎ.ಬಿ.ಶೆಟ್ಟಿ ವೃತ್ತದಿಂದ ಕಂಕನಾಡಿ ಕರಾವಳಿ ಸರ್ಕಲ್‌ವರೆಗೆ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸುವು ಕೆಲಸ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಇದಕ್ಕಾಗಿ 10 ಕೋ.ರೂ. ವ್ಯಯಿಸಲಾಗುತ್ತಿದೆ. ಈ ಕಾಮಗಾರಿಯನ್ನು ಆದಷ್ಟು ಶೀಘ್ರ ಮುಗಿಸಿ ನವೆಂಬರ್‌ನಲ್ಲಿ ಇಂಧನ ಖಾತೆಯ ಸಚಿವರಿಂದ ಉದ್ಘಾಟನೆ ಮಾಡಿಸಲಾಗುವುದು ಎಂದು ಜೆ.ಆರ್.ಲೋಬೊ ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಗಳೂರನ್ನು ಆಧುನೀಕರಣಗೊಳಿಸಲು ಸುಮಾರು 300 ಕೋ.ರೂ. ಅನುದಾನ ಪಡೆಯಲು ಪ್ರಯತ್ನಿಸಲಾಗುವುದು. ನೆಹರೂ ಮೈದಾನ ಮತ್ತು ಉರ್ವದಲ್ಲಿ ವಿದ್ಯುತ್ ಕೇಂದ್ರ ಸ್ಥಾಪಿಸಲು ಭೂಮಿಯ ಆವಶ್ಯಕತೆಯಿದ್ದು ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತುಕತೆ ಮಾಡಲಾಗಿದೆ. ಭೂಮಿ ಆದಷ್ಟು ಬೇಗನೆ ಸಿಗಲಿದ್ದು ಅಲ್ಲೂ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಜೆ.ಆರ್.ಲೋಬೊ ನುಡಿದರು.

ಇಲಾಖೆಯಲ್ಲಿ ದಾರಿ ದೀಪ ಆನ್- ಆಫ್ ಮಾಡಲು ಆಧುನಿಕ ಬಾಕ್ಸ್‌ ಬಳಸಬೇಕು. ಅದಕ್ಕಾಗಿ 12 ಲಕ್ಷ ರೂ. ವೆಚ್ಚದಲ್ಲಿ 719 ಬಾಕ್ಸ್‌ ಗಳನ್ನು ಖರೀದಿಸಬೇಕಿದೆ. ಈ ಬಾಕ್ಸ್‌ಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮೆಸ್ಕಾಂ ಸಲಹಾ ಸಮಿತಿ ಸಭೆ ನಡೆದು 6 ತಿಂಗಳಾದರೂ ಇನ್ನೂ ಯಾಕೆ ಟೆಂಡರ್ ಕರೆಯಲಿಲ್ಲ ಎಂದು ಶಾಸಕ ಜೆ.ಆರ್. ಲೋಬೊ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಭವಾಗದಂತೆ ನೊಡಿಕೊಳ್ಳುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಮೆಸ್ಕಾಂ ಎಇ ಮಂಜಪ್ಪ, ಸಲಹಾ ಸಮಿತಿಯ ಸದಸ್ಯರಾದ ಮೋಹನ್ ಮೆಂಡನ್, ದುರ್ಗಾ ಪ್ರಸಾದ್ ಹಾಗೂ ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News