×
Ad

"ಸರ್ಜಿಕಲ್ ದಾಳಿಯನ್ನು ನೇರ ಪ್ರಸಾರ ಮಾಡಲಾಗಿತ್ತು''

Update: 2017-09-29 12:48 IST

ಹೊಸದಿಲ್ಲಿ,ಸೆ.29 : ಕಳೆದ ವರ್ಷ ಪಾಕಿಸ್ತಾನ ಆಕ್ರಮಿತ  ಕಾಶ್ಮೀರದಲ್ಲಿನ ಉಗ್ರ ಶಿಬಿರಗಳ ಮೇಲೆ ಭಾರತೀಯ ಸೇನೆಯ ಕಮಾಂಡೋಗಳು ನಡೆಸಿದ್ದ ಸರ್ಜಿಕಲ್ ದಾಳಿಯ  ಲೈವ್ ಸ್ಟ್ರೀಮಿಂಗ್ (ನೇರ ಪ್ರಸಾರ)ಅನ್ನು ದಿಲ್ಲಿ ಮತ್ತು ಉಧಂಪುರದಲ್ಲಿರುವ ಸೇನಾ ಮುಖ್ಯ ಕಾರ್ಯಾಲಯಕ್ಕೆ ಮಾಡಲಾಗಿತ್ತು ಎಂದು ಸರ್ಜಿಕಲ್ ದಾಳಿಯ ಉಸ್ತುವಾರಿ ಅಧಿಕಾರಿಯಾಗಿದ್ದ,  ಈಗ ನಿವೃತ್ತರಾಗಿರುವ  ಲೆಫ್ಟಿನೆಂಟ್ ಜನರಲ್  ಡಿ ಎಸ್ ಹೂಡಾ ಹೇಳಿದ್ದಾರೆ.

ಇಂಡಿಯಾ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ``ನಮಗೆ ಸರ್ಜಿಕಲ್ ದಾಳಿಯ ಚಿತ್ರಗಳು ನೇರವಾಗಿ ದೊರೆಯುತ್ತಿದ್ದವು. ಉಧಂಪುರದಲ್ಲಿನ ನಮ್ಮ ಕಮಾಂಡ್ ಮುಖ್ಯ ಕಾರ್ಯಾಲಯದ ಕೊಠಡಿಯಲ್ಲಿ ನಾನು ಕುಳಿತು ಸಂಪೂರ್ಣ ಕಾರ್ಯಾಚರಣೆಯನ್ನು ವೀಕ್ಷಿಸಿದ್ದೆ,'' ಎಂದು  ಭಾರತೀಯ ಸೇನೆಯ ಉತ್ತರ ಕಮಾಂಡ್ ನ ಮುಖ್ಯಸ್ಥರಾಗಿದ್ದ ಹೂಡಾ ತಿಳಿಸಿದ್ದಾರೆ.

ಆದರೆ ಈ ಲೈವ್ ಸ್ಟ್ರೀಮಿಂಗ್ ಅನ್ನು  ಉಪಗ್ರಹದ ಮುಖಾಂತರ ಯಾ ಬೇರೆ ಯಾವ ತಂತ್ರಜ್ಞಾನದ ಮುಖಾಂತರ ನಡೆಸಲಾಯಿತೆಂಬುದನ್ನು ಮಾತ್ರ ಅವರು ಬಹಿರಂಗ ಪಡಿಸಿಲ್ಲ. ``ಆದರೆ ಈ ರೀತಿ ಮಾಡುವ ಸಾಮರ್ಥ್ಯ ಭಾರತೀಯ ಸೇನೆಗಿದೆ,'' ಎಂದಷ್ಟೇ ಅವರು ಹೇಳಿದರು.
ಸರ್ಜಿಕಲ್ ದಾಳಿಗೆ  ತೆರಳಿದ್ದ ಕಟ್ಟ ಕಡೆಯ ತಂಡ ಬೆಳಿಗ್ಗೆ ಸುಮಾರು 6.30ರ ಹೊತ್ತಿಗೆ ಹಿಂದಿರುಗಿತು ಎಂದರು. ``ಕೆಲವು ತಂಡಗಳು ಬೇಗ ತೆರಳಿ ತಮ್ಮ ಗುರಿಗಳ ಮೇಲೆ ದಾಳಿ ನಡೆಸಿ ಹಿಂದಿರುಗಿದ್ದರೆ ಇನ್ನು ಕೆಲವು ತಂಡಗಳು ತಡವಾಗಿ ತೆರಳಿ ತಡವಾಗಿ ಹಿಂದಿರುಗಿದವು,'' ಎಂದರು.

``ದಾಳಿಯಿಂದಾಗಿ ಪಾಕಿಸ್ತಾನಿ ಪಡೆಗಳಲ್ಲಿ ಭಯ ತಾಂಡವವಾಡಿತ್ತು. ಅವರು ಅನಿಯಂತ್ರಿತವಾಗಿ ಗುಂಡಿನ ದಾಳಿ ನಡೆಸುತ್ತಿದ್ದರು. ನಮ್ಮಲ್ಲಿ  ಬ್ಯಾಕ್-ಅಪ್ ತಂಡಗಳಿದ್ದವು. ಯಾವುದೇ ತಂಡ ದಾಳಿ ನಡೆಸಿ ಹಿಂದಿರುಗಲು ವಿಫಲವಾದರೆ, ಇಲ್ಲವೇ ತೊಂದರೆಯಲ್ಲಿದ್ದರೆ ಕೂಡಲೇ ಅಲ್ಲಿಗೆ ಹೋಗಿ ಅವರನ್ನು ರಕ್ಷಿಸಲು ತಂಡಗಳಿದ್ದವು,'' ಎಂದು ದಾಳಿಯನ್ನು ಸಂಘಟಿಸಿದ್ದ ಹೂಡಾ ತಿಳಿಸಿದರು.

``ಕಾರ್ಯಾಚರಣೆ ಮುಗಿದ ಕೂಡಲೇ  ಸರಕಾರ  ಈ ಬಗ್ಗೆ ಹೇಳಿಕೆ ನೀಡಲು ಸಿದ್ಧವಾಗಿತ್ತು. ಕಾರ್ಯಾಚರಣೆ ವಿಫಲವಾದರೂ ಟೀಕೆಗಳನ್ನು ಎದುರಿಸಲು ಅದು ಸಿದ್ಧವಾಗಬೇಕಿತ್ತು. ಹೀಗಿರುವಾಗ ಕಾರ್ಯಾಚರಣೆ ಯಶಸ್ವಿಗೊಳಿಸಲು ಸೇನೆಯ ಮೇಲೆ ಹೆಚ್ಚಿನ ಒತ್ತಡವಿತ್ತು,'' ಎಂದು  ಹೂಡಾ ಹೇಳಿದ್ದಾರೆ.
ಸರ್ಜಿಕಲ್ ದಾಳಿ ನಡೆಸಲು ಒಂದು ದಿನ ವಿಳಂಬವಾಗಿತ್ತು. ಆರಂಭದಲ್ಲಿ  ಸೆಪ್ಟೆಂಬರ್ 27ರಂದು ದಾಳಿ ನಡೆಸಲು ಯೋಜಿಸಲಾಗಿತ್ತಾದರೂ ಅದನ್ನು ನಂತರ ಸೆಪ್ಟೆಂಬರ್ 28ರಂದು ನಡೆಸಲಾಗಿತ್ತು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News