×
Ad

ಬರ್ಕೆ ಫ್ರೆಂಡ್ಸ್ ಹುಲಿವೇಷ ತಂಡಕ್ಕೀಗ 25 ವರ್ಷಗಳ ಸಂಭ್ರಮ !

Update: 2017-09-29 14:52 IST

ಮಂಗಳೂರು, ಸೆ. 29: ಮಂಗಳೂರು ದಸರಾ ಸಂದರ್ಭದಲ್ಲಿ ವರ್ಷಂಪ್ರತಿ ಭಾರೀ ಸದ್ದು ಮಾಡುತ್ತಿರುವ ‘ಬರ್ಕೆ ಫ್ರೆಂಡ್ಸ್ ಹುಲಿವೇಷ ತಂಡ’ಕ್ಕೆ ಈಗ 25 ವರ್ಷಗಳ ಸಂಭ್ರಮ. ಕುದ್ರೋಳಿ ದೇವಸ್ಥಾನದ ನವೀಕರಣದ ವೇಳೆ ಪೊಳಲಿ ಕಮಲಾಕ್ಷ ಎಂಬವರ ನೇತೃತ್ವದಲ್ಲಿ ರಚಿಸಲ್ಪಟ್ಟ ಈ ‘ಹುಲಿವೇಷ ತಂಡ’ವು ಬಳಿಕ ‘ಬರ್ಕೆ ಫ್ರೆಂಡ್ಸ್’ ಸಂಘಟನೆಯ ರೂಪದಲ್ಲಿ ಬೆಳೆದು ನಿಂತಿದೆ. ಈ ಸಂಘಟನೆಯ ಹಿಂದಿರುವ ಪ್ರಮುಖ ಶಕ್ತಿ ಮತ್ತು ವ್ಯಕ್ತಿ ಬರ್ಕೆಯ ಯಜ್ಞೇಶ್ವರ್.

ಇವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಈ ತಂಡಕ್ಕೆ ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದ ನವರಾತ್ರಿ ಆಚರಣೆ ವೇಳೆ ಮೂರನೇ ಮರ್ಯಾದೆ ಸಿಗುತ್ತಿರುವುದು ಗಮನಾರ್ಹ. 25 ವರ್ಷದ ಹಿಂದೆ ಸುಮಾರು 41 ಹುಲಿವೇಷದಿಂದ ಆರಂಭಗೊಂಡ ಈ ತಂಡದಲ್ಲಿ ಇದೀಗ 101 ಹುಲಿವೇಷಧಾರಿಗಳಿದ್ದಾರೆ. ಇನ್ನುಳಿದಂತೆ 150ಕ್ಕೂ ಅಧಿಕ ಕಲಾವಿದರು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

‘ಬರ್ಕೆ ಫ್ರೆಂಡ್ಸ್’ ತನ್ನ 25ನೆ ವರ್ಷಾಚರಣೆಯ ಅಂಗವಾಗಿ ಶನಿವಾರ ನಡೆಯುವ ಕುದ್ರೋಳಿ ದೇವಸ್ಥಾನದ ದಸರಾ ಮೆರವಣಿಗೆಯಲ್ಲಿ ವಿಶೇಷ ಅಲಂಕಾರ ವಿರುವ ಏಳು ಟ್ರಕ್‌ಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಧಾರ್ಮಿಕ ನಂಬಿಕೆಯೊಂದಿಗೆ ಸುಮಾರು 300 ವರ್ಷಗಳ ಇತಿಹಾಸವಿರುವ ಈ ಹುಲಿವೇಷವು ‘ಸಂಪ್ರದಾಯ’ ಎಂಬ ನೆಲೆಯಲ್ಲಿ ಈ ತಂಡಗಳನ್ನು ನಡೆಸುತ್ತಿದ್ದೇವೆ. ತಂಡಗಳನ್ನು ಮುನ್ನಡೆಸಲು ಬೇಕಾಗಿರುವುದು ಶ್ರದ್ಧೆ ಮತ್ತು ಭಕ್ತಿ. ಹುಲಿವೇಷ, ತಾಸೆ, ಬ್ಯಾಂಡ್ ಮತ್ತಿತರ ಖರ್ಚು ವೆಚ್ಚ ಎಂದೆಲ್ಲಾ ಸುಮಾರು 50 ಲಕ್ಷ ರೂ. ಬೇಕಾಗುತ್ತದೆ. ದಾನಿಗಳ ನೆರವಿನಿಂದ ಅತ್ಯಂತ ಯಶಸ್ವಿಯಾಗಿ ಇದನ್ನು ನಿಭಾಯಿಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ, ಸಂಘಟನೆಯ ಸ್ಥಾಪಕಾಧ್ಯಕ್ಷ ಯಜ್ಞೇಶ್ವರ್ ಬರ್ಕೆ.

ತುಳುನಾಡಿನ ಸಂಸ್ಕೃತಿ ಮತ್ತು ದೇಶದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಯುವಕರಲ್ಲಿ ಗೌರವ ಮೂಡಿಸುವ ಕೆಲಸವನ್ನು ಬರ್ಕೆ ಫ್ರೆಂಡ್ಸ್ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಯಜ್ಞೇಶ್ವರ್ ಬರ್ಕೆ ಹೆಮ್ಮೆಯಿಂದ ಹೇಳುತ್ತಾರೆ.

ಹುಲಿ ವೇಷಕ್ಕೆ ಸುಮಾರು 300 ವರ್ಷದ ಇತಿಹಾಸವಿರಬಹುದು. ಇದು ಕೇವಲ ಧಾರ್ಮಿಕ ಆಚರಣೆ, ನಂಬಿಕೆಯಲ್ಲ. ಸಾಂಸ್ಕೃತಿಕ ಕಲೆಯೂ ಹೌದು. ಇದು ಎಲ್ಲರಿಗೂ ಸಿದ್ಧಿಸುವುದಿಲ್ಲ. ನಿಷ್ಠೆಯಿಂದ ಬಣ್ಣ ಹಚ್ಚಿ ಕುಣಿದರೆ ಮಾತ್ರ ಈ ವೇಷಕ್ಕೊಂದು ಗಾಂಭೀರ್ಯ ಬಂದೀತು. ಇದರ ಬಗ್ಗೆ ಸಮಗ್ರ ಅಧ್ಯಯನ ಮಾಡುವ ಅಗತ್ಯವಿದೆ. ಜಾನಪದ ವಿದ್ವಾಂಸರು ಈ ಬಗ್ಗೆ ಚಿಂತಿಸಿದರೆ ಹೆಚ್ಚು ಉಪಯುಕ್ತವಾದೀತು ಎಂದು ಯಜ್ಞೇಶ್ವರ್ ಬರ್ಕೆ ಅಭಿಪ್ರಾಯಪಡುತ್ತಾರೆ.

ಇದೊಂದು ಹರಕೆಯಾಗಿದೆ. ಎಷ್ಟೋ ಮಂದಿ ಗುಣಪಡಿಸಲಾದ ರೋಗದ ಶಮನಕ್ಕೆ ಬಣ್ಣ ಹಚ್ಚಿ ಹುಲಿ ವೇಷಧಾರಿಗಳಾದದ್ದು ಉಂಟು. ನಾನು ನನ್ನ 5ರ ಹರೆಯದಲ್ಲಿ ಹುಲಿ ವೇಷಧಾರಿಯಾದೆ. ಕಳೆದ 51 ವರ್ಷದಿಂದ ನಾನು ವೇಷಧಾರಿಯಾಗಿದ್ದೇನೆ ಎನ್ನುತ್ತಾರೆ ರಮೇಶ್ ಕರ್ಕೇರಾ.

ಊದು ಪೂಜೆ: ಶುಕ್ರವಾರ ಬೆಳಗ್ಗೆ ಮಣ್ಣಗುಡ್ಡ ಸರಕಾರಿ ಶಾಲೆಯಲ್ಲಿ ಹುಲಿವೇಷದ ಊದು ಪೂಜೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಹಳೆಯ ಹುಲಿ ವೇಷಧಾರಿಗಳ ಜೊತೆಗೆ ಹಲವು ಬಾಲಕರು ಕೂಡ ಹುಲಿ ವೇಷ ಧರಿಸಿ ಗಮನ ಸೆಳೆದರು.

ಬರ್ಕೆ ಫ್ರೆಂಡ್ಸ್ ತಂಡದ ಗೌರವ ಅಧ್ಯಕ್ಷರಾಗಿ ಯಜ್ಞೇಶ್ವರ್ ಬರ್ಕೆ, ಅಧ್ಯಕ್ಷರಾಗಿ ಕಿಶನ್ ಕುಮಾರ್ ಬರ್ಕೆ, ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯನಿರ್ವಸುತ್ತಿದ್ದಾರೆ. ಇವರೊಂದಿಗೆ ಸುಚೀಂದ್ರ ಅಮೀನ್, ಗಾಡ್ವಿನ್, ರಾಜು, ದಿವಾಕರ್, ರಾಕೇಶ್, ಸನತ್, ವಾಮನ್ ಶೆಟ್ಟಿ, ಅಮಿತ್ ಮತ್ತಿತರರು ಸಹಕರಿಸುತ್ತಿದ್ದಾರೆ.

ದಸರಾ ಮೆರವಣಿಗೆಗೆ ಟ್ರಕ್‌ಗಳನ್ನು ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೊದ ಆಡಳಿತ ನಿರ್ದೇಶಕ ರಾಜೇಶ್, ಆ್ಯಸಿಲ್ ಟ್ರಾವೆಲ್ಸ್‌ನ ಮಾಲಕ, ಕೆನರಾ ಪಿಂಟೋ ಸಂಸ್ಥೆಯ ಸುನೀಲ್ ಪಾಯಸ್ ನೀಡುತ್ತಿದ್ದಾರೆ. ಹುಲಿವೇಷವಲ್ಲದೆ ಬರ್ಕೆ ಫ್ರೆಂಡ್ಸ್ ಸದಸ್ಯರು ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ. ಮಣ್ಣಗುಡ್ಡೆಯ ಸರಕಾರಿ ಶಾಲೆಗೆ ಅಪಾರ ನೆರವು ನೀಡುತ್ತಿದ್ದಾರೆ. ಅಲ್ಲದೆ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲು ತ್ತಿರುವ, ಆರ್ಥಿಕವಾಗಿ ದುರ್ಬಲವಿರುವ ನೂರಾರು ಮಂದಿಗೆ ವೈದ್ಯಕೀಯ ನೆರವು ನೀಡಲಾಗಿದೆ. ರಕ್ತದಾನ ಶಿಬಿರಗಳನ್ನು ಕೂಡ ಈ ತಂಡ ಸಂಘಟಿಸುತ್ತಿದೆ. ಹುಲಿವೇಷ ತಂಡಗಳಲ್ಲಿ ಪಾಲ್ಗೊಳ್ಳುವವರ ಕುಟುಂಬಗಳಿಗೆ ಆರ್ಥಿಕ ನೆರವನ್ನು ಕೂಡ ಸಂಘಟನೆ ನೀಡುತ್ತಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News