“ನೀನು ಭಯೋತ್ಪಾದಕ” ಎಂದು ನಿಂದಿಸಿ, ಕಿರುಕುಳ ನೀಡಿದ ಶಿಕ್ಷಕರು

Update: 2017-09-29 14:01 GMT

ಉತ್ತರಪ್ರದೇಶ, ಸೆ.29: ‘ನೀನು ಭಯೋತ್ಪಾದಕ’ ಎಂದು ಶಿಕ್ಷಕರು, ಪ್ರಾಂಶುಪಾಲ ನಿಂದಿಸಿದ್ದರಿಂದ ಹಾಗೂ ನಿರಂತರ ಕಿರುಕುಳ ನೀಡಿದ್ದರಿಂದ ಮನನೊಂದ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ನಡೆದಿರುವುದಾಗಿ thewire.in ವರದಿ ಮಾಡಿದೆ.

ಕಾನ್ಪುರದ ಕಲ್ಯಾಣ್ ಪುರದ ದಿಲ್ಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಯನ್ನು ಆ ಶಾಲೆಯ ಶಿಕ್ಷಕರು ಹಾಗು ಪ್ರಾಂಶುಪಾಲ ‘ಭಯೋತ್ಪಾದಕ’ ಎಂದು ನಿಂದಿಸಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿ ಫಿನಾಯಿಲ್ ಕುಡಿದು, ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು thewire.in ವರದಿ ಮಾಡಿದೆ.

ಆತ್ಮಹತ್ಯೆಗೆ ಯತ್ನಿಸುವ ಮುನ್ನ ವಿದ್ಯಾರ್ಥಿ ಪತ್ರವೊಂದನ್ನು ಬರೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಆದಿತ್ಯನಾಥ್ ಗಮನಹರಿಸಬೇಕು ಹಾಗು ತನ್ನನ್ನು ನಿಂದಿಸಿದ ಶಿಕ್ಷಕರು ಮತ್ತು ಪ್ರಾಂಶುಪಾಲರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾನೆ.

ಆತ್ಮಹತ್ಯೆಗೆ ಯತ್ನಿಸಿದ ನಂತರ ವಿದ್ಯಾರ್ಥಿಯನ್ನು ಸ್ಥಳಿಯ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. “ಮುಖ್ಯಮಂತ್ರಿಗಳೇ, ನಾನು ಭಯೋತ್ಪಾದಕನಲ್ಲ, ನಾನೋರ್ವ ವಿದ್ಯಾರ್ಥಿ” ಎಂದು ಆತ ಪ್ರಜ್ಞೆ ಬಂದ ನಂತರ ಹೇಳಿದ್ದಾನೆ ಎನ್ನಲಾಗಿದೆ.

“ಪ್ರತಿದಿನ ನನ್ನ ಚೀಲವನ್ನು ಶಿಕ್ಷಕರು ಪರಿಶೀಲಿಸುತ್ತಿದ್ದರು. ತರಗತಿಯ ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುವಂತೆ ನನಗೆ ಹೇಳಲಾಗಿತ್ತು. ನಾನೇದರೂ ಕೇಳಿದರೆ ಶಿಕ್ಷಕರು ನನ್ನನ್ನು ತರಗತಿಯಿಂದ ಹೊರಗೆ ಕಳುಹಿಸುತ್ತಿದ್ದರು. ಶಿಕ್ಷಕರ ಈ ನಡವಳಿಕೆಯಿಂದಾಗಿ ಇತರ ವಿದ್ಯಾರ್ಥಿಗಳು ನನ್ನೊಂದಿಗೆ ಸೇರುತ್ತಿರಲಿಲ್ಲ. ನಾನು ಎ.ಪಿ.ಜೆ. ಅಬ್ದುಲ್ ಕಲಾಂರಂತೆ ವಿಜ್ಞಾನಿಯಾಗಲು ಬಯಸಿದ್ದೆ. ಆದರೆ ಶಿಕ್ಷಕರು ನನ್ನನ್ನು ಭಯೋತ್ಪಾದಕನಂತೆ ನೋಡುತ್ತಿದ್ದರು” ಎಂದು ವಿದ್ಯಾರ್ಥಿ ಆರೋಪಿಸಿರುವುದಾಗಿ thewire.in ವರದಿ ಮಾಡಿದೆ.

ಈ ಬಗ್ಗೆ ವಿದ್ಯಾರ್ಥಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News