ರೈಲ್ವೆ ಇಲಾಖೆಯೇ ಜನರನ್ನು ಕೊಲ್ಲುವಾಗ, ಭಯೋತ್ಪಾದಕರೇಕೆ ಬೇಕು?: ರಾಜ್ ಠಾಕ್ರೆ
ಹೊಸದಿಲ್ಲಿ, ಸೆ. 30: ಶುಕ್ರವಾರ ಎಲ್ಫಿನ್‌ಸ್ಟೋನ್ ರೈಲು ನಿಲ್ದಾಣದ ಮೇಲ್ಸೇತುವೆಯಲ್ಲಿ ನಡೆದ ಕಾಲ್ತುಳಿತದಲ್ಲಿ 22 ಜನರು ಸಾವಿಗೀಡಾಗಿ 30ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಭಾರತೀಯ ರೈಲ್ವೆಯನ್ನು ದೂರಿದ್ದಾರೆ. ‘‘ ಉಗ್ರವಾದಿಗಳು ಯಾ ಪಾಕಿಸ್ತಾನದಂತಹ ವೈರಿ ನಮಗೇಕೆ ಬೇಕು ? ಜನರನ್ನು ಕೊಲ್ಲಲು ನಮ್ಮ ಸ್ವಂತ ರೈಲ್ವೆಯೇ ಸಾಕೆಂದು ಅನಿಸುತ್ತದೆ,’’ ಎಂದು ಠಾಕ್ರೆ ಹೇಳಿದ್ದಾರೆ.
ದುರಂತದ ಬಗ್ಗೆ ರೈಲ್ವೆ ಇಲಾಖೆ ನೀಡಿದ ಪ್ರತಿಕ್ರಿಯೆಯನ್ನು ಪ್ರಶ್ನಿಸಿದ ಠಾಕ್ರೆ ‘‘ಮುಂಬೈಯಲ್ಲಿ ಮಳೆ ಬರುತ್ತಿರುವುದು ಇದೇ ಮೊದಲಲ್ಲ. ಈ ದುರ್ಘಟನೆ ಮಳೆಯಿಂದಾಗಿ ನಡೆಯಿತು ಎಂದು ಅವರೇಕೆ ಹೇಳುತ್ತಿದ್ದಾರೆ?’’ ಎಂದು ಠಾಕ್ರೆ ಹೇಳಿದರು.
ವಲಸಿಗರು ತಂಡೋಪತಂಡವಾಗಿ ನಗರಕ್ಕೆ ಬರುತ್ತಾ ಇರುವ ತನಕ ಇಂತಹ ಕಾಲ್ತುಳಿತಗಳು ಮುಂಬೈಯಲ್ಲಿ ಸಂಭವಿಸುತ್ತಲೇ ಇರುತ್ತವೆ. ಈ ಸಮಸ್ಯೆಯಿಂದಲೇ ಮೂಲಭೂತ ಸೌಕರ್ಯಗಳು ಕುಸಿಯುತ್ತಿವೆ’’ ಎಂದು ಠಾಕ್ರೆ ಅಭಿಪ್ರಾಯ ಪಟ್ಟರು.
ರೈಲ್ವೆಯ ಈಗಿನ ಮೂಲಭೂತಸೌಕರ್ಯಗಳು ಸುಧಾರಿಸದ ಹೊರತು ಬುಲೆಟ್ ಟ್ರೈನ್ ಯೋಜನೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ. ‘‘ಲೋಕಲ್ ರೈಲುಗಳ ವ್ಯವಸ್ಥೆಯನ್ನು ಸುಧಾರಿಸದೇ ಇದ್ದರೆ ಮುಂಬೈಯಲ್ಲಿ ಬುಲೆಟ್ ರೈಲು ಯೋಜನೆಗೆ ಒಂದೇ ಒಂದು ಇಟ್ಟಿಗೆ ಇಡಲು ಬಿಡುವುದಿಲ್ಲ,’’ ಎಂದು ಠಾಕ್ರೆ ಘೋಷಿಸಿದರು.
ರೈಲ್ವೆ ಮೇಲ್ಸೇತುವೆಗಳಲ್ಲಿ ಅಕ್ರಮವಾಗಿ ಕಾರ್ಯಾಚರಿಸುವ ಮಾರಾಟಗಾರರನ್ನು ತೆರವುಗೊಳಿಸಲು ಗಡುವನ್ನೂ ಅವರು ರೈಲ್ವೆ ಇಲಾಖೆಗೆ ವಿಧಿಸಿದರು. ‘‘ಇಲಾಖೆ ಕ್ರಮ ಕೈಗೊಳ್ಳದೇ ಹೋದರೆ ನಾವೇ ಕ್ರಮ ಕೈಗೊಳ್ಳಬೇಕಾಗುತ್ತದೆ,’’ ಎಂದೂ ಅವರು ಎಚ್ಚರಿಸಿದರು. ‘‘ಅಕ್ಟೋಬರ್ 5ರಂದು ರೈಲ್ವೆಗೆ ಕೈಗೊಳ್ಳಬೇಕಾದ ಕ್ರಮಗಳ ಪಟ್ಟಿಯನ್ನು ಗಡುವಿನೊಂದಿಗೆ ನೀಡಲಾಗುವುದು. ಸುಧಾರಣೆಯಾಗದೇ ಇದ್ದರೆ ನಾವೇ ನೋಡಿಕೊಳ್ಳುತ್ತೇವೆ,’’ ಎಂದು ಠಾಕೆ ಹೇಳಿದರು.
ಅಕ್ಟೋಬರ್ 5ರಂದು ತಾವು ಪಶ್ಚಿಮ ರೈಲ್ವೆ ಮುಖ್ಯ ಕಾರ್ಯಾಲಯದ ಹೊರಗೆ ಪ್ರತಿಭಟನೆ ನಡೆಸುವುದಾಗಿಯೂ ಅವರು ತಿಳಿಸಿದರು.