ಪುತ್ತೂರಿನಲ್ಲಿ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಆರಂಭ
ಪುತ್ತೂರು, ಸೆ. 30: ನಗರದ ಎಸ್‌ಬಿಬಿ ಸೆಂಟರ್‌ನಲ್ಲಿ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಶನಿವಾರ ಆರಂಭಗೊಂಡಿದ್ದು, ಮುಂದಿನ ಒಂದು ತಿಂಗಳಲ್ಲಿ ಅಧಿಕೃತವಾಗಿ ಕಾರ್ಯಾರಂಭಿಸಲಿದೆ ಎಂದು ಸಂಸ್ಥೆ ಅಧ್ಯಕ್ಷ ಮಂಜಪ್ಪ ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬೆಂಗಳೂರಿನಲ್ಲಿ 3 ವರ್ಷಗಳ ಹಿಂದೆ ಸೌಂದರ್ಯ ಕ್ರೆಡಿಟ್ ಕೊ-ಆಪರೇಟಿವ್ ಸಂಸ್ಥೆ ಆರಂಭಿಸಲಾಗಿತ್ತು. ಇಲ್ಲಿ 2016-17ರ ವರ್ಷದಲ್ಲಿ 30 ಕೋಟಿ ರೂ. ವ್ಯವಹಾರ ನಡೆಸಿದೆ. ಇದರಲ್ಲಿ 63 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನೂ ನೀಡಲಾಗುತ್ತಿದೆ ಎಂದು ಹೇಳಿದರು.
ಪುತ್ತೂರಿನಲ್ಲಿ ತನ್ನ ಎರಡನೇ ಶಾಖೆಯನ್ನು ಆರಂಭಿಸಲಾಗಿದೆ. ಇದರೊಂದಿಗೆ ಮಂಗಳೂರು, ಸುಳ್ಯ ತಾಲೂಕುಗಳಲ್ಲಿಯೂ ಶಾಖೆಯನ್ನು ತೆರೆಯುವ ಚಿಂತನೆ ಸಂಸ್ಥೆಗೆ ಇದೆ. ಮೂರನೇ ಶಾಖೆ ಬೆಂಗಳೂರಿನಲ್ಲಿ ತೆರೆಯಲಾಗುವುದು ಎಂದು ತಿಳಿಸಿದರು.
ಸಮಾಜದ ಏಳಿಗೆಗಾಗಿ ದುಡಿಯುವ ಚಿಂತನೆ ನಡೆಸುತ್ತಿರುವ ಸಂಸ್ಥೆ ಧರ್ಮಾರ್ಥ ನಿಧಿಯೊಂದನ್ನು ಸ್ಥಾಪಿಸಿದೆ. ಇದನ್ನು ಮಹಿಳಾ ಸಬಲೀಕರಣ, ಟೈಲರಿಂಗ್ ತರಬೇತಿ, ಉಚಿತ ಹೊಲಿಗೆ ಯಂತ್ರ ನೀಡುವುದು, ರಕ್ತದಾನ ಶಿಬಿರ, ವೈಧ್ಯಕೀಯ ಶಿಬಿರ, ಅನಾರೋಗ್ಯ ಪೀಡಿತ ಹಾಗೂ ಅಶಕ್ತ ಪಾಲಿಗೆ ಸಹಕಾರಿಯಾಗುವಂತಹ ಚಟುವಟಿಕೆ ನಡೆಸಲಾಗುವುದು. ಆರೋಗ್ಯ ಕ್ಷೇಮ ನಿಧಿ ಮೂಲಕ ಸೌಹಾರ್ದ ಸಹಕಾರಿ ಸಂಘದ ಪ್ರತಿ ಶಾಖಾ ಸದಸ್ಯರಿಗೂ ರಿಯಾಯತಿ ದರದಲ್ಲಿ ಕಾಯಿಲೆ ಪರೀಕ್ಷೆ ನಡೆಸುವ ಗುರಿ ಇಟ್ಟುಕೊಂಡಿದೆ. ಪುತ್ತೂರಿನಲ್ಲಿ ಡೈಯಗ್ನೋಸ್ಟಿಕ್ ಕೇಂದ್ರ ತೆರೆಯುವ ಇರಾದೆಯೂ ಸಂಸ್ಥೆಯದ್ದಾಗಿದೆ ಎಂದರು.