×
Ad

ಪ್ರಣಾಳಿಕೆಯಲ್ಲಿ ​‘ಪಾನನಿಷೇಧ’ ಘೋಷಿಸುವ ಪಕ್ಷಕ್ಕೆ ಬೆಂಬಲ-ವಿವೇಕ್ ವಿನ್ಸೆಂಟ್ ಪಾಯಸ್

Update: 2017-09-30 18:11 IST

ಪುತ್ತೂರು, ಸೆ. 30: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಾನನಿಷೇಧವನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಪಕ್ಷಕ್ಕೆ ಬೆಂಬಲ ನೀಡಲಾಗುವುದು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ತಿಳಿಸಿದ್ದಾರೆ.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಈಗಾಗಲೇ ಮನವಿ ನೀಡಲಾಗಿದೆ. ಕಳೆದ 25 ವರ್ಷಗಳಲ್ಲಿ ವೇದಿಕೆ ಮದ್ಯ ಮುಕ್ತ ಸಮಾಜಕ್ಕಾಗಿ ಹೋರಾಟ ನಡೆಸುತ್ತಿದೆ. ಮಹಾತ್ಮಾ ಗಾಂಧೀಜಿಯವರ 18 ರಚನಾತ್ಮಕ ಅಂಶಗಳಲ್ಲಿ 3ನೇಯದು ದುಶ್ಚಟ ಮುಕ್ತ ಸಮಾಜ. ಇದನ್ನು ಕಾರ್ಯಕ್ಕೆ ತರುವ ಹಿನ್ನೆಲೆಯಲ್ಲಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅ. 2ರಂದು ರಾಜ್ಯದ 74 ಕಡೆಗಳಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದೆ. ಮುಂದಿನ ಹಂತವಾಗಿ ಪಾನ ನಿಷೇಧಕ್ಕೆ ಸರಕಾರವನ್ನು ಒತ್ತಾಯಿಸಲಾಗುವುದು. ಬರುವ ವಿಧಾನಸಭೆ ಚುನಾವಣೆ ಸಂದರ್ಭ ಪಾನ ನಿಷೇಧವನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಪಕ್ಷಕ್ಕೆ ಪೂರ್ಣ ಬೆಂಬಲ ನೀಡಲಾಗುವುದು ಎಂದರು.

ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಮಿಕ್ಕಿ ಮದ್ಯದಂಗಡಿಗಳಿವೆ. ಇದರಿಂದಾಗಿ ಸರಕಾರ ಮತ್ತು ಜನಪರ ಕಾಳಜಿಯೊಂದಿಗೆ ಶ್ರಮಿಸುವ ಸಂಘ ಸಂಸ್ಥೆಗಳ ಅಭಿವೃದ್ಧಿಯ ಕನಸು ನುಚ್ಚುನೂರಾಗಿದೆ. ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದ್ದು, ಯುವ ಸಮುದಾಯ ಸಹಿತ ಸಮಾಜ ಮದ್ಯ ಮತ್ತು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿದೆ. ಸರಕಾರದ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು, ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದರೆ ಪರಿಸ್ಥಿತಿ ಹದಗೆಡಲಿದೆ. ಮದ್ಯದ ತೆರಿಗೆಗಿಂತಲೂ, ಸಮಾಜದ ನಷ್ಟವನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಸರಕಾರ ಪಾನನಿಷೇಧವನ್ನು ಜಾರಿಗೆ ತರಬೇಕೆಂಬ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ವಲಯಾಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ವಲಯ ಜನಜಾಗೃತಿ ಅಧ್ಯಕ್ಷೆ ಪ್ರಶಾಂತ್ ಮುರ, ಪ್ರಚಾರ ಸಮಿತಿ ಸಂಚಾಲಕ ಕೃಷ್ಣ ಕುಮಾರ್, ತಾಲೂಕು ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News