ಬಂಟ್ವಾಳ: ಕವಿ ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ, ವಿಚಾರಸಂಕಿರಣ ಕಾರ್ಯಕ್ರಮ

Update: 2017-10-01 11:33 GMT

ಬಂಟ್ವಾಳ, ಅ.1: ಈ ಶತಮಾನದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಮೊಗೇರಿ ಗೋಪಾಲಕೃಷ್ಣ ಅಡಿಗರನ್ನು ಸರಕಾರ ನೆನಪಿಸುವ ಮೂಲಕ ಅಡಿಗರ ಜನ್ಮಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದು ಕನ್ನಡ ಭಾಷಾ ಸಲಹಾ ಮಂಡಳಿ ಸಂಚಾಲಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.

ಬಂಟ್ವಾಳದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ರವಿವಾರ ಬಂಟ್ವಾಳ ಜೋಡುಮಾರ್ಗದ ಮೊಗೇರಿ ಗೋಪಾಲಕೃಷ್ಣ ಅಡಿಗ ಶತಮಾನೋತ್ಸವ ಸಮಿತಿ ವತಿಯಿಂದ ಕವಿ ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ಕಾರ್ಯಕ್ರಮ ಹಾಗೂ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಿಸೆಂಬರ್‌ನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಅಡಿಗರ ಕುರಿತು ರಾಷ್ಟ್ರೀಯ ವಿಚಾರಸಂಕಿರಣವನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಪ್ರಶ್ನಿಸುವ ಮನೋಭಾವವನ್ನು ಕಲಿಸಿದ ಅಡಿಗರ ಸಾಹಿತ್ಯ ಇಂದು ಪ್ರಸ್ತುತ ಎಂದ ಅವರು, ಅಡಿಗರ ಕಾವ್ಯಗಳಲ್ಲಿ ಆದರ್ಶ, ವಾಸ್ತವಗಳ ಮುಖಾಮುಖಿ ಇದೆ. ಅವರನ್ನು ಶೋಧಿಸುವ ಕಾವ್ಯ. ಇಂದು ಕವಿಗಳ ನೆನಪು, ವಿಚಾರಸಂಕಿರಣಗಳು ಏಕೆ ಪ್ರಸ್ತತವೆಂದರೆ ಧ್ಯಾನಶೀಲ ಮನಸ್ಸಿನ ಸ್ಥಿತಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಾಹಿತ್ಯದ ಪ್ರಸ್ತುತತೆ ಸಾಮಾಜಿಕ ಆಕ್ರಮಣಗಳಿಂದ ತಪ್ಪಿಸಿಕೊಳ್ಳುವ ಅಡಗುದಾಣಗಳು ಇದ್ದಂತೆ. ನಮ್ಮನ್ನು ನಾವು ಕಾಪಾಡಿಕೊಳ್ಳಲು ಸಾಹಿತ್ಯ ಬೇಕು, ನಮ್ಮ ಕಾಲದ ಸವಾಲು ಇದು ಎಂದು ಡಾ. ನರಹಳ್ಳಿ ಹೇಳಿದರು.

ಹಿರಿಯ ಸಾಹಿತಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ವಿಚಾರಸಂಕಿರಣದ ಉದ್ದೇಶವನ್ನು ವಿವರಿಸಿದರು.

ಅತಿಥಿಯಾಗಿ ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರ ರಾವ್ ಭಾಗವಹಿಸಿ ಮಾತನಾಡಿ, ಅಡಿಗರ ಸಾಹಿತ್ಯದ ಕುರಿತು ಬೆಳಕು ಚೆಲ್ಲಿದರು. ಅಡಿಗರ ಗದ್ಯ ಸಾಹಿತ್ಯ ಕುರಿತು ವಿಶ್ರಾಂತ ಪ್ರಾಧ್ಯಾಪಕ ಡಾ. ಆರ್. ನರಸಿಂಹಮೂರ್ತಿ ಉಪನ್ಯಾಸ ನೀಡುವರು. ಬಳಿಕ ಅಡಿಗರ ಕಾವ್ಯಾನುಸಂಧಾನ ಕುರಿತು ಚಿಂತಕ ಲಕ್ಷ್ಮೀಶ ತೋಳ್ಪಾಡಿ, ಆರ್. ನರಸಿಂಹ ಮೂರ್ತಿ, 'ಅಡಿಗರ ಕಾವ್ಯಾನುಸಂಧಾನದ' ಕುರಿತು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ, "ಅಡಿಗರ ಕಾವ್ಯಾ" ಬಗ್ಗೆ ವಿಮರ್ಶಕ ಎಸ್.ಆರ್.ವಿಜಯ ಶಂಕರ್ ಹಾಗೂ 'ಅಡಿಗರು ಮತ್ತು ಪ್ರಕೃತ ನಮ್ಮ ಸಾಹಿತ್ಯ ಸಂದರ್ಭ' ಕುರಿತು ಪ್ರಾಧ್ಯಾಪಕ ಡಾ.ವರದರಾಜ ಚಂದ್ರಗಿರಿ ಉಪನ್ಯಾಸ ನೀಡಿದರು. ಎಚ್.ಎಸ್. ಚಂದ್ರಶೇಖರ ಕೆದ್ಲಾಯ ಬ್ರಹ್ಮಾವರ ಅವರು ಅಡಿಗರ ಕಾವ್ಯ ಗಾಯನ ಪ್ರಸ್ತುತ ಪಡಿಸಿದರು.

ಸಮಿತಿ ಉಪಾಧ್ಯಕ್ಷ  ವಿಶ್ವನಾಥ ಬಂಟ್ವಾಳ, ಕಸಾಪ ತಾಲೂಕು ಘಟಕ ಅಧ್ಯಕ್ಷ ಕೆ. ಮೋಹನ ರಾವ್, ಸಮಿತಿ ಕೋಶಾಧಿಕಾರಿ ಬಿ.ತಮ್ಮಯ್ಯ, ಮಹಾಬಲೇಶ್ವರ ಹೆಬ್ಬಾರ ಮೊದಲಾದವರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಕೆ.ಮೋಹನ ರಾವ್ ವಂದಿಸಿದರು. ಕಾರ್ಯದರ್ಶಿ ಡಾ. ಅಜಕ್ಕಳ ಗಿರೀಶ ಭಟ್ಟ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News