×
Ad

ಸುಲಭದ ಕ್ಯಾಚ್ ಕಷ್ಟಕರವಾಗಿ ಪಡೆದ ಬುಮ್ರಾ!

Update: 2017-10-01 18:03 IST

ನಾಗ್ಪುರ, ಅ.1: ರವಿವಾರ ಇಲ್ಲಿ ನಡೆದ ಐದನೆ ಹಾಗೂ ಅಂತಿಮ ಪಂದ್ಯದ ವೇಳೆ ಆಸ್ಟ್ರೇಲಿಯದ ಆರಂಭಿಕ ಆಟಗಾರ ಆ್ಯರೊನ್ ಫಿಂಚ್ ಸುಲಭದ ಕ್ಯಾಚ್‌ನ್ನು ಕಷ್ಟಕರವಾಗಿ ಪಡೆದ ಭಾರತದ ಬೌಲರ್ ಜಸ್‌ಪ್ರಿತ್ ಬುಮ್ರಾ ಎಲ್ಲರ ಗಮನ ಸೆಳೆದರು.

11.3ನೆ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಫಿಂಚ್ ಮಿಡ್-ಆಫ್‌ನಲ್ಲಿದ್ದ ಬುಮ್ರಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ, ಬುಮ್ರಾ ಮೊದಲ ಯತ್ನದಲ್ಲಿ ಸರಿಯಾಗಿ ಕ್ಯಾಚ್ ಪಡೆಯಲು ವಿಫಲರಾದರು. ಚೆಂಡು ಬುಮ್ರಾ ಕಾಲಿನಲ್ಲಿ ಸುತ್ತಿಕೊಂಡ ಹಿನ್ನೆಲೆಯಲ್ಲಿ ಬುಮ್ರಾ ಕೊನೆಗೂ ಚೆಂಡನ್ನು ಸುರಕ್ಷಿತವಾಗಿ ಕ್ಯಾಚ್ ಪಡೆಯಲು ಸಫಲರಾದರು. ಬುಮ್ರಾ ಸುಲಭ ಕ್ಯಾಚ್‌ನ್ನು ಬಹಳ ಕಷ್ಟಕರವಾಗಿಸಿಕೊಂಡರು. ಕ್ಯಾಚ್ ಕೈಬಿಡದ ಬುಮ್ರಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಯಿತು.

ಆಸೀಸ್ ನಾಯಕ ಫಿಂಚ್ ಪ್ರಸ್ತುತ ಭಾರತ ವಿರುದ್ಧ ಸರಣಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು ಮೊದಲ 2 ಏಕದಿನ ಪಂದ್ಯಗಳಲ್ಲಿ ಗಾಯದ ಸಮಸ್ಯೆಯಿಂದಾಗಿ ಆಡಿರಲಿಲ್ಲ. 3 ಹಾಗೂ 4ನೆ ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 124 ಹಾಗೂ 94 ರನ್ ಗಳಿಸಿದ್ದರು.

 ಬೆಂಗಳೂರಿನಲ್ಲಿ ನಡೆದಿದ್ದ ನಾಲ್ಕನೆ ಏಕದಿನ ಪಂದ್ಯಗಳಲ್ಲಿ ವಾರ್ನರ್ ಅವರೊಂದಿಗೆ 231 ರನ್ ಜೊತೆಯಾಟ ನಡೆಸಿದ್ದ ಫಿಂಚ್ ಆಸ್ಟ್ರೇಲಿಯ ದೊಡ್ಡ ಮೊತ್ತ ಕಲೆಹಾಕಲು ನೆರವಾಗಿದ್ದರು.

ಐದನೆ ಪಂದ್ಯದಲ್ಲೂ ವಾರ್ನರ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ಫಿಂಚ್ ಮೊದಲ 10 ಓವರ್‌ಗಳಲ್ಲಿ 60 ರನ್ ಸೇರಿಸಿ ಉತ್ತಮ ಆರಂಭ ನೀಡಿದ್ದರು. ಆದರೆ, ಪಾಂಡ್ಯ ಎಸೆತವನ್ನು ಕೆಣಕಲು ಹೋಗಿ 36 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 32 ರನ್ ಗಳಿಸಿ ಔಟಾದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News