ಹಿರಿಯ ನಾಗರಿಕರ ಸಂಘ ವತಿಯಿಂದ ವಿಶ್ವ ಹಿರಿಯ ನಾಗರಿಕ ದಿನಾಚರಣೆ

Update: 2017-10-01 13:42 GMT

ಮಂಗಳೂರು, ಅ.1: ಮಂಗಳೂರು ಹಿರಿಯ ನಾಗರಿಕರ ಸಂಘದ (ಎಜ್) ವತಿಯಿಂದ ನಗರದ ರೋಶನಿ ನಿಲಯದ ಸಭಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಕ್ರೀಯರಾಗಿರುವ ಹಿರಿಯ ನಾಗರಿಕರಾದ ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಟಿ.ಜಿ.ಶೆಣೈ, ನಿವೃತ್ತ ಮುಖೋಪಾಧ್ಯಯ ಮುಹಮ್ಮದ್ ಹನೀಫ್, ನಿವೃತ್ತ ಪ್ರೊಫೆಸರ್ ಮರಿಯಾ ಡಿ ಕೋಸ್ತಾ ಮೊದಲಾದವರನ್ನು ಸಂಘದ ಅಧ್ಯಕ್ಷ ಝಾಹಿದ್ ಹುಸೈನ್ ಬಾಜಿ ಅವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಕೆನರಾ ಬ್ಯಾಂಕ್ ವೆಲೆನ್ಸಿಯಾ ಶಾಖೆಯ ಪ್ರಬಂಧಕರಾದ ಲಿನೆಟ್ ಪಿಂಟೋ ಮಾತನಾಡುತ್ತಾ ಇತರರಿಗೆ ಸಹಾಯ ಮಾಡುವ ಮೂಲಕ ನಮ್ಮ ಬದುಕಿನಲ್ಲಿ ಸಂತೋಷವನ್ನು ಕಾಣುವಂತಾಗಬೇಕು ಎಂದು ಹಿರಿಯ ನಾಗರಿಕರಿಗೆ ಶುಭ ಕೋರಿದರು.

ಹಿರಿಯ ನಾಗರಿಕರ ಪರವಾಗಿ ಮಾತನಾಡಿದ ನಿವೃತ್ತ ಉಪನ್ಯಾಸಕಿ ಪ್ರೊ.ಮರಿಯಾ ಡಿ ಕೋಸ್ತಾ, ಹಿರಿಯ ನಾಗರಿಕರು ತಮ್ಮ ಬಳಿ ಆರ್ಥಿಕ ಸಂಪತ್ತು ಕಡಿಮೆ ಇದೆ ಎಂದು ತಮ್ಮ ಇಳಿ ವಯಸ್ಸಿನಲ್ಲಿ ಚಿಂತೆ ಪಡಬೇಕಾಗಿಲ್ಲ. ತಮ್ಮ ಬಳಿ ಇರುವ ದಯೆ, ಕರುಣೆ, ಸಹನೆ, ಅನುಕಂಪ, ಮಾರ್ಗದರ್ಶನ ನೀಡಬಲ್ಲ ಮಾನವೀಯ ಗುಣಗಳನ್ನು ಇತರರೊಂದಿಗೆ ಹಂಚಿಕೊಂಡು ಇನ್ನಷ್ಟು ಶ್ರೀಮಂತರಾಗಬಹುದು. ಇಳಿ ವಯಸ್ಸಿನಲ್ಲೂ ಸದಾ ಚಟುವಟಿಯಿಂದ ಇದ್ದು ಕಾಯಿಲೆಯಿಂದ ದೂರವಿರಿ ಎಂದು ಕಿವಿಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಝಾಹಿದ್ ಹುಸೈನ್ ಬಾಜಿ ಮಾತನಾಡುತ್ತಾ, ಹಿರಿಯ ನಾಗರಿಕ ಆರೋಗ್ಯ ರಕ್ಷಣೆಗೆ ಪೂರಕವಾಗಿ ವೈದ್ಯಕೀಯ ನೆರವು ನೀಡಲು ಸರಕಾರದ ಸೂಕ್ತ ಸ್ಪಂದನ ಅಗತ್ಯ ಮುಖ್ಯವಾಗಿ ಅವರಿಗೆ ಅಗತ್ಯವಾಗಿರುವ ಔಷಧಿಗಳು ಸುಲಭವಾಗಿ ದೊರೆಯುವಂತಾಗಬೇಕು ಎಂದರು.

 ವೇದಿಕೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ರೀಟಾ ರೋಡ್ರಿಗಸ್, ಮಾರ್ಕ್ ಸಲ್ದಾನ, ಲಕ್ಷ್ಮೀ ರಾವ್ ಆರೂರು, ಲೂಸಿ ವಾಝ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News