ಮಂಗಳೂರು: ಮೇ ಫ್ಲವರ್ ಗಿಡಗಳನ್ನು ನೆಡುವ ಯೋಜನೆಗೆ ಚಾಲನೆ
ಮಂಗಳೂರು, ಅ.1: ನಗರದ ಕೆ.ಪಿ.ಟಿ. ವೃತ್ತದಿಂದ ಮಂಗಳೂರು (ಬಜ್ಪೆ-ಕೆಂಜಾರು) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ರಸ್ತೆಯ ಇಕ್ಕಡೆಗಳಲ್ಲಿ 2,000 ಮೇ ಫ್ಲವರ್ ಗಿಡಗಳನ್ನು ನೆಡುವ ಯೋಜನೆಯನ್ನು ‘ಮಂಗಳೂರು ಫ್ಲವರ್ ಸಿಟಿ ಸೊಸೈಟಿ’ ಎಂಬ ಸಂಸ್ಥೆಯು ಹಾಕಿಕೊಂಡಿದ್ದು, ಕೆಇಡಿಐಯುಎಂ ಈ ಗಿಡಗಳ ರಕ್ಷಣೆಗೆ ಮರಮಟ್ಟು ನೀಡಿವೆ.
ಕ್ರೆಡೈ ಸಂಸ್ಥೆಯು ಪ್ರಾಯೋಜಕತ್ವ ನೀಡಿದೆ. ನೆಟ್ಟ ಗಿಡವನ್ನು ಬಯೋ ಗ್ರೀನ್ ನರ್ಸರಿಯು ಪೋಷಣೆಯ ಜವಾಬ್ದಾರಿ ಹೊತ್ತಿದೆ. ಅದರಂತೆ ರವಿವಾರ ನಗರದ ಕೆಪಿಟಿ ಬಳಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಜೆ.ಆರ್. ಲೋಬೊ, ಮೇಯರ್ ಕವಿತಾ ಸನಿಲ್ ಜಂಟಿಯಾಗಿ ಗಿಡ ನೆಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮೇಯರ್ ಹಾಗೂ ಸೊಸೈಟಿಯ ಅಧ್ಯಕ್ಷ ಮಹಾಬಲ ಮಾರ್ಲ, ಮಂಗಳೂರನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಮತ್ತು ಬೆಂಗಳೂರಿಗೆ ಗಾರ್ಡನ್ ಸಿಟಿ ಎಂಬ ಹೆಸರಿದ್ದಂತೆ ಮಂಗಳೂರು ಫ್ಲವರ್ ಸಿಟಿ ಎಂದು ಕರೆಯುವಂತೆ ಮಾಡಬೇಕು. ಅದಕ್ಕಾಗಿ ರಸ್ತೆಯ ಎರಡೂ ಬದಿಗಳಲ್ಲಿ ಹೂವಿನ ಗಿಡಗಳನ್ನು ನೆಟ್ಟು, ಮುಂದಿನ ದಿನಗಳಲ್ಲಿ ಇದರೊಂದಿಗೆ ಹೆಚ್ಚಿನ ಪ್ರವಾಸಿಗರನ್ನು ಇತ್ತ ಆಕರ್ಷಿಸುವಂತೆ ಮಾಡಬೇಕೆಂಬ ಗುರಿ ಇದೆ ಎಂದರು.
ಈ ಸಂದರ್ಭ ಮನಪಾ ಆಯುಕ್ತ ಮುಹಮ್ಮದ್ ನಝೀರ್, ಆರ್‌ಎಫ್‌ಒ ಶ್ರೀಧರ್, ಸಂಸ್ಥೆಯ ಕಾರ್ಯದರ್ಶಿ ಶವಾಝ್ ಮುಹಮ್ಮದ್, ಹಣಕಾಸು ವ್ಯವಸ್ಥಾಪಕ ಗೋವಿಂದ ಪ್ರಸಾದ್, ಟ್ರಸ್ಟ್‌ನ ಸದಸ್ಯ ಕ್ಲಿಪರ್ಡ್ ಲೋಬೊ, ಯೋಗ ಕುಟೀರ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಆಝಾದ್ ಸ್ಟೀಲ್‌ನ ಮನ್ಸೂರ್ ಆಝಾದ್, ಬಯೋಗ್ರೀನ್ ನರ್ಸರಿಯ ಮೋಹನ್ ಕುಮಾರ್, ನ್ಯಾಯವಾದಿ ಲಕ್ಷ್ಮಣ್ ಕುಂದರ್ ಉಪಸ್ಥಿತರಿದ್ದರು.
ಒಂದು ಗಿಡಕ್ಕೆ 100 ರೂ. ನೀಡಿ ಬೆಂಗಳೂರಿನಿಂದ ಗಿಡ ತರಲಾಗಿದೆ. ಯುಎಇಯ ಮೊಯ್ದಿನ್ ವುಡ್‌ನಿಂದ 5ಲಕ್ಷ ರೂ. ಧನ ಸಹಾಯ ಸಿಕ್ಕಿದೆ. ಕೊಟ್ಟಾರ ಚೌಕಿಯಿಂದ ನಂತೂರು ಜಂಕ್ಷನ್‌ವರಗೆ, ನಗರದ ಕೆಲ ಸರ್ಕಲ್‌ಗಳು, ಪಾರ್ಕ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಗಿಡಗಳನ್ನು ನೆಟ್ಟು, ಪೋಷಣೆ ಮಾಡುವ ಜವಾಬ್ದಾರಿಯನ್ನು ಸಂಸ್ಥೆ ಹಾಕಿಕೊಂಡಿದೆ ಎಂದು ಮಹಾಬಲ ಮಾರ್ಲ ತಿಳಿಸಿದರು.