×
Ad

ಹಿರಿಯ ನಾಗರಿಕರ ಕಾಯ್ದೆಯಲ್ಲಿ ತಿದ್ದುಪಡಿ ತರಬೇಕು: ಡಾ.ರವೀಂದ್ರನಾಥ ಶ್ಯಾನುಭಾಗ್

Update: 2017-10-01 19:22 IST

ಮಂಗಳೂರು, ಅ.1: ಹಿರಿಯ ನಾಗರಿಕರ ಕಾಯ್ದೆ 2007ರ ಪ್ರಕಾರ ಹಿರಿಯ ನಾಗರಿಕರಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು 90 ದಿನದಲ್ಲಿ ಇತ್ಯರ್ಥಪಡಿ ಸಬೇಕು. ಆದರೆ ಇದು ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಈ ಕಾಯ್ದೆಯಲ್ಲಿ ಅಗತ್ಯವಾಗಿ ಕೆಲವು ತಿದ್ದುಪಡಿ ಆಗಬೇಕಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಡಾ. ರವೀಂದ್ರನಾಥ ಶ್ಯಾನುಭಾಗ್ ಹೇಳಿದ್ದಾರೆ.

ಮಂಗಳೂರಿನ ಕಲ್ಪಟ್ರಸ್ಟ್ ವತಿಯಿಂದ ನಗರದ ಶಾರದಾ ವಿದ್ಯಾಲಯದಲ್ಲಿ ರವಿವಾರ ನಡೆದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ನಾಗರಿಕರಿಗೆ ಶೀಘ್ರ ನ್ಯಾಯ ಸಿಗಬೇಕು. ಅಧಿಕಾರಿಗಳು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸಬೇಕು. ಆದರೆ ಕೆಲವೆಡೆ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬರುತ್ತಿವೆ. ಒಂದು ಪ್ರಕರಣದಲ್ಲಿ ದೂರುದಾರರು ಮಲಗಿದ್ದಲ್ಲಿಗೆ ಸಹಾಯಕ ಕಮಿಷನರ್ ತೆರಳಿ ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ. ಹಿರಿಯ ನಾಗರಿಕರ ಪರವಾಗಿ ತೀರ್ಪು ಬಂದರೂ ಕೂಡ ಅಧಿಕಾರಿಗಳು ಅನುಷ್ಠಾನಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಏಜೆನ್ಸಿಯೊಂದು ಈ ಕಾಯ್ದೆಗೆ ಬೇಕಾದ ತಿದ್ದುಪಡಿಯ ಕುರಿತು ಮಾಹಿತಿಯನ್ನು ಪಡೆದುಕೊಂಡಿದೆ ಎಂದು ರವೀಂದ್ರನಾಥ ಶಾನ್‌ಭಾಗ್‌ ಹೇಳಿದರು.

ಹಿರಿಯ ನಾಗರಿಕರ ಪರವಾಗಿ ಮಾತ್ರವಲ್ಲ ಮಾನವ ಹಕ್ಕು ಉಲ್ಲಂಘನೆ ಸಹಿತ ಯಾವುದೇ ಪ್ರಕರಣದಲ್ಲಿ ಸಂತ್ರಸ್ತರಿಂದ ಇದುವರೆಗೆ ನಾನು ನಯಾ ಪೈಸೆ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ ಡಾ.ರವೀಂದ್ರನಾಥ ಶ್ಯಾನುಭಾಗ್, 1980ರಿಂದ ಈವರೆಗೆ 36 ಸಾವಿರ ವಿವಿಧ ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ಮುಂದಾಗಿದ್ದೇನೆ. ಎಲ್ಲ ಪ್ರಕರಣಗಳಲ್ಲೂ ಉಚಿತವಾಗಿ ಕಾನೂನು ಸಲಹೆ, ನೆರವನ್ನು ನೀಡಿದ್ದೇನೆ ಎಂದರು.

ಶಾರದಾ ವಿದ್ಯಾಲಯದ ಮುಖ್ಯಸ್ಥ ಪ್ರೊ.ಎಂ.ಬಿ.ಪುರಾಣಿಕ್, ಕಾವೂರು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ತಾರಾ ರಾವ್, ಭಾರತ್ ಸ್ಕೌಟ್ ಗೈಡ್ಸ್ ಜಿಲ್ಲಾ ತರಬೇತುದಾರ ಪ್ರದೀಪ್ ಕುಮಾರ್, ಕಲ್ಪಟ್ರಸ್ಟ್‌ನ ಟ್ರಸ್ಟಿ ಪ್ರಮೀಳಾ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News