×
Ad

ಬೆಸೆಂಟ್ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮ

Update: 2017-10-01 19:25 IST

ಮಂಗಳೂರು, ಅ.1: ನಗರದ ಬೆಸೆಂಟ್ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಕಾರ್ಯಕ್ರಮ ರವಿವಾರ ಕಾಲೇಜಿನಲ್ಲಿ ನಡೆಯಿತು.

ಶತಮಾನೋತ್ಸವದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ಸಚೇತಕ ಗಣೇಶ್ ಕಾರ್ಣಿಕ್ ನೂರನೆ ವರ್ಷದ ಸಡಗರ ದಲ್ಲಿರುವ ಬೆಸೆಂಟ್ ಶಿಕ್ಷಣ ಸಂಸ್ಥೆಯು ತನ್ನ ಶೈಕ್ಷಣಿಕ ಹಾದಿಯ ಮೂಲಕ ರಾಷ್ಟ್ರೀಯತೆ ಹಾಗೂ ಮಹಿಳಾ ಸಬಲೀಕರಣವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದೆ ಎಂದು ಶ್ಲಾಘಿಸಿದರು.

ಐರಿಶ್ ಮಹಿಳೆ ಡಾ.ಆ್ಯನಿಬೆಸೆಂಟ್ ‘ಬೆಸೆಂಟ್ ಪ್ರಾಥಮಿಕ ಶಾಲೆ’ಯನ್ನು 1918ರಲ್ಲಿ ಸ್ಥಾಪಿಸಿದ್ದರು. ಅವರ ಹುಟ್ಟುಹಬ್ಬದ ದಿನವಾದ ರವಿವಾರ ಶತಮಾನೋತ್ಸವ ವರ್ಷಾಚರಣೆ ನಡೆಸಲಾಗುತ್ತಿರುವುದು ಸಂತಸದ ವಿಚಾರ ಎಂದು ಗಣೇಶ್ ಕಾರ್ಣಿಕ್ ಹೇಳಿದರು.

ಶಾಸಕ ಜೆ.ಆರ್.ಲೋಬೊ ಮಾತನಾಡಿ, ಮಹಿಳೆ ಶಿಕ್ಷಣದ ಮೂಲಕ ಸಬಲವಾದರೆ ಆ ಊರು, ಜಿಲ್ಲೆ, ರಾಜ್ಯ ಸಬಲವಾಗಲು ಸಾಧ್ಯ. ದೇಶದಲ್ಲಿ ಮಹಿಳಾ ಶಿಕ್ಷಣ ಪ್ರಮಾಣ ಶೇ.50ರ ಆಸುಪಾಸಿನಲ್ಲಿದ್ದು, ಇದು ಇನ್ನಷ್ಟು ಮುಂದುವರಿಯಬೇಕು. ಕೇರಳದಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ದೇಶದಲ್ಲಿಯೇ ಉತ್ತಮವಾಗಿದ್ದರೆ, ಬಿಹಾರ ಬಹಳಷ್ಟು ಹಿಂದೆ ಇದೆ ಎಂದು ನುಡಿದರು.

ಮೇಯರ್ ಕವಿತಾ ಸನಿಲ್ ಮಾತನಾಡಿ, ಬೆಸೆಂಟ್ ಶಿಕ್ಷಣ ಸಂಸ್ಥೆ ಶೈಕ್ಷಣಿಕವಾಗಿ ಸುದೀರ್ಘ 100 ವರ್ಷಗಳ ಸೇವೆ ನೀಡಿರುವುದು ಹೆಮ್ಮೆಯ ವಿಚಾರ. ನಾನು ಕೂಡ ಬೆಸೆಂಟ್ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದೇನೆ. ಅಂದು ನನಗೆ ವಿದ್ಯಾಭ್ಯಾಸದ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ ಶಿಕ್ಷಕರು ಇಂದು ನಾನು ಮೇಯರ್ ಸ್ಥಾನದಲ್ಲಿ ಇರುವಾಗಲೂ ಮಾರ್ಗದರ್ಶನ ನೀಡುತ್ತಿದ್ದಾರೆ. ಸ್ಕಿಲ್ ಗೇಮ್, ಮಸಾಜ್ ಪಾರ್ಲರ್ ದಾಳಿ ನಡೆಸಿದ ಸಂದರ್ಭ ಸೂಕ್ತ ಮುಂಜಾಗರೂಕತೆ ವಹಿಸುವಂತೆ ಅವರು ಸೂಚಿಸುವುದು ಗಮನಾರ್ಹ ಎಂದರು.

ಶ್ರೀ ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದಜಿ ಆಶೀರ್ವಚನ ನೀಡಿದರು. ಮಂಗಳೂರು ವಿ.ವಿ. ರಿಜಿಸ್ಟ್ರಾರ್ ಡಾ. ಲೋಕೇಶ್ ಕೆ. ಎಂ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು.

ಆರ್‌ಬಿಐ ಡೆಪ್ಯುಟಿ ಗವರ್ನರ್ ವಿಠಲ್‌ದಾಸ್ ಲೀಲಾಧರ್, ಬೆಸೆಂಟ್ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ಮನೋರಮ ಬಾಯಿ, ಉದ್ಯಮಿ ದಿನಕರ್ ಸುಲೈಯ್, ಮಂಗಳೂರು ಥಿಯೋಸೋಫಿಕಲ್ ಸೊಸೈಟಿ ಅಧ್ಯಕ್ಷ ಟಿ.ನರಸಿಂಹ ಶೆಟ್ಟಿ, ಪ್ರಮುಖರಾದ ಪ್ರೊ. ಎಂ.ಆರ್. ಪ್ರಭು, ಸುಶೀಲ ಡಿ.ರಾವ್ ಮುಖ್ಯ ಅತಿಥಿಗಳಾಗಿದ್ದರು.

ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಘದ ಪ್ರಮುಖರಾದ ಮಣೇಲ್ ಅಣ್ಣಪ್ಪ ನಾಯಕ್, ಶ್ಯಾಮ್ ಸುಂದರ್ ಕಾಮತ್, ನಗರ ನಾರಾಯಣ ಶೆಣೈ, ಸುರೇಶ್ ಮಲ್ಯ, ಡಾ. ಮಂಜುಳಾ ಕೆ.ಟಿ ಮುಂತಾದವರು ಉಪಸ್ಥಿತರಿದ್ದರು.

ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಕೆ. ದೇವಾನಂದ ಪೈ ಸ್ವಾಗತಿಸಿದರು. ಡಾ. ಸತೀಶ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿದರು. ಸತೀಶ್ ಕುಮಾರ್ ಭಟ್ ವಂದಿಸಿದರು. ಡಾ. ಮೀನಾಕ್ಷಿ ರಾಮಚಂದ್ರ ಮತ್ತು ಪ್ರೊ. ಶೆರ್ಲಿ ರಾಣಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News