ಮೂಡುಪಡುಕೋಡಿ: ಸಿಡಿಲು ಬಡಿದು ಮನೆಗೆ ಹಾನಿ

Update: 2017-10-01 14:15 GMT

ಬಂಟ್ವಾಳ, ಅ.1: ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಸಿಡಿಲಿನಿಂದ ಮನೆಗೆ  ಹಾನಿಯಾಗಿದೆ.

ಮೂಡುಪಡುಕೋಡಿ ಗ್ರಾಮದ ಎರ್ಮೆನಾಡುವಿನ ಯೋಗೀಶ ನಾಯ್ಕ ಎಂಬವರ ಮನೆಗೆ ತಡರಾತ್ರಿ ಸುಮಾರು 2.30 ಗಂಟೆಯ ಹೊತ್ತಿಗೆ ಸಿಡಿಲು ಬಡಿದಿದ್ದು, ಮನೆಯ ವಿದ್ಯುತ್ ಸಂಪರ್ಕ ಸಂಪೂರ್ಣ ಹಾನಿಗೀಡಾಗಿದೆ.

ಫ್ಯಾನ್, ವಯರಿಂಗ್, ಮೀಟರ್ ಬೋರ್ಡ್, ಟಿ.ವಿ. ಸುಟ್ಟಿದ್ದು, ಅಡುಗೆ ಮನೆಯಲ್ಲಿದ್ದ ಅಲ್ಯೂಮೀನಿಯಂ ಪಾತ್ರೆಗಳೂ ಕರಚಿದೆ. ಅಲ್ಲದೆ ಯೋಗೀಶ್ ಅವರ ತಾಯಿ ವಸಂತಿ ಅವರು ಮಲಗಿದ್ದ ಚಾಪೆ ಭಾಗಶ: ಸುಟ್ಟು ಹೋಗಿದ್ದು, ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಕಿಟಕಿ ಗಾಜುಗಳು ಒಡೆದಿದೆ.

ಜಿ.ಪಂ. ಸದಸ್ಯರಾದ ಎಂ. ತುಂಗಪ್ಪ ಬಂಗೇರ, ಬಿ. ಪದ್ಮಶೇಖರ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜಿಲ್ಲಾ ಹಾಪ್‌ಕಾಮ್ ಅಧ್ಯಕ್ಷ ಲಕ್ಷ್ಮಿ ನಾರಾಯಣ ಉಡುಪ, ತಾಪಂ ಸದಸ್ಯ ರಮೇಶ್ ಕುಡ್ಮೇರು, ಗ್ರಾಪಂ ಅಧ್ಯಕ್ಷೆ ಸುಜಾತಾ, ಉಪಾಧ್ಯಕ್ಷ ಶಂಕರ ಶೆಟ್ಟಿ ಬೆದ್ರಮಾರ್, ಪಿಡಿಒ ಗಣೇಶ್ ಶೆಟ್ಟಿಗಾರ್, ಕಂದಾಯ ಇಲಾಖಾಧಿಕಾರಿಗಳು, ಪುಂಜಾಲಕಟ್ಟೆ ಠಾಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದರು.

ಸ್ಥಳೀಯ ಶಿವಾಜಿ ಫ್ರೆಂಡ್ಸ್ ಅಧ್ಯಕ್ಷ ಹರೀಶ್ ಪೂಜಾರಿ ಮತ್ತು ಸದಸ್ಯರು ಮನೆಯನ್ನು ಸ್ವಚ್ಛಗೊಳಿಸುವಲ್ಲಿ ಸಹಕರಿಸಿದರು. ಗ್ರಾಪಂ ವತಿಯಿಂದ ವಿದ್ಯುತ್ ಸೌಲಭ್ಯ ಒದಗಿಸಿಕೊಡುವುದಾಗಿ ಉಪಾಧ್ಯಕ್ಷ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News