ವೈಭವದ ಮಂಗಳೂರು ದಸರಾಕ್ಕೆ ಸಂಭ್ರಮದ ತೆರೆ
ಮಂಗಳೂರು, ಅ.1: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಂದ ಆಚರಿಸಲ್ಪಡುತ್ತಿರುವ ಮಂಗಳೂರು ದಸರಾ ಮೆರವಣಿಗೆ ನಗರದ ಪ್ರದಕ್ಷಿಣೆಯ ಬಳಿಕ ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹಗಳನ್ನು ರವಿವಾರ ಮುಂಜಾನೆ ಕುದ್ರೋಳಿ ದೇವಸ್ಥಾನದ ವಠಾರದಲ್ಲಿರುವ ಪುಷ್ಕರಣಿಯಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ಜಲಸ್ತಂಭಗೊಳಿಸುವ ಮೂಲಕ ಮಂಗಳೂರು ದಸರಾ ತರೆ ಕಂಡಿತು.
ಶನಿವಾರ ಸಂಜೆ ಮಹಾ ಗಣಪತಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹ, ನವದುರ್ಗೆಯರಾದ ಶೈಲಪುತ್ರಿ, ಆದಿಶಕ್ತಿ, ಸ್ಕಂದಮಾತ, ಕಾತ್ಯಾ ಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ, ಕೂಷ್ಮಾಂಡಿನಿ, ಚಂದ್ರಘಂಟ, ಬ್ರಹ್ಮಚಾರಿಣಿ ದೇವಿಯರ ವಿಗ್ರಹಗಳ ವರ್ಣರಂಜಿತ ಮೆರವಣಿಗೆ ನಗರದ ವಿವಿಧ ಕಡೆಗಳಲ್ಲಿ ಕಿಕ್ಕಿರಿದ ಜನ ಸಂದಣಿ ನಡುವೆ ಸಾಗಿತು. ನಗರದ ಕಂಬ್ಳಾ ರಸ್ತೆಯ ಮೂಲಕ ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್‌ಬಾಗ್, ಬಲ್ಲಾಳ್ ಬಾಗ್, ಪಿವಿಎಸ್ ವೃತ್ತ, ನವಭಾರತ ವೃತ್ತ, ಕೆ.ಎಸ್.ರಾವ್ ರಸ್ತೆ, ಹಂಪನಕಟ್ಟೆ ಮುಂಭಾಗದಿಂದ ವಿಶ್ವವಿದ್ಯಾನಿಲಯ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ರಥಬೀದಿ, ಅಳಕೆ ಮಾರ್ಗವಾಗಿ ಮೆರವಣಿಗೆ ಮರಳಿ ಕುದ್ರೋಳಿಗೆ ತಲುಪಿ ಸಮಾಪನ ಗೊಂಡಿತು.
ಶನಿವಾರ ರಾತ್ರಿಯಿಂದ ರವಿವಾರ ಮಂಜಾನೆಯವರೆಗೆ ಸಾಗಿದ ಮೆರವಣಿಗೆಯಲ್ಲಿ ಪ್ರಮುಖವಾಗಿ ಪೌರಾಣಿಕ ಸನ್ನಿವೇಶಗಳ ಟ್ಯಾಬ್ಲೋಗಳು ಹಾಗೂ ವಿವಿಧ ರೀತಿಯ ಹುಲಿ ವೇಷದ ತಂಡಗಳು ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಸಾಂಸ್ಕೃತಿಕ ಕಲಾತಂಡಗಳು, ತ್ರಿಶೂರಿನ ಬಣ್ಣದ ಕೊಡೆಗಳು, ಡೊಳ್ಳು ಕೊಣಿತದ ತಂಡಗಳು, ಹುಲಿವೇಷಗಳು, ಗೊಂಬೆ ಕುಣಿತ, ಕೇರಳದ ಚೆಂಡೆವಾದನ ತಂಡ, ಭಜನಾ ತಂಡಗಳು ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಸಾಂಪ್ರದಾಯಿಕ ಚೆಂಡೆ ಹಾಗೂ ವಾದ್ಯ ಘೋಷಗಳೊಂದಿಗೆ ಕಲಾವಿದರು ಮೆರವಣಿಗೆಗೆ ಮೆರುಗು ನೀಡಿದ್ದರು.
ರವಿವಾರ ಬೆಳಗ್ಗೆ ಸುಮಾರು 9.30 ಹೊತ್ತಿಗೆ ಶಾರದಾ ಮಾತೆಯ ವಿಗ್ರಹವನ್ನು ಧಾರ್ಮಿಕ ವಿಧಿಗಳೊಂದಿಗೆ ಪುಷ್ಕರಣೆಯಲ್ಲಿ ಬಿಡಲಾಯಿತು.