ಕಾರಂತರ ವಿಚಾರಧಾರೆ ಇಂದಿಗೂ ಪ್ರಸ್ತುತ: ಡಾ.ಹರೀಶ್ ಹಂದೆ

Update: 2017-10-01 14:48 GMT

ಕೋಟ, ಅ.1: ದೇಶದ ಪರಿಸರ ಕಾಳಜಿ, ಪರಮಾಣು ವ್ಯವಸ್ಥೆಯ ಬಗ್ಗೆ ಸುಮಾರು 60ವರ್ಷಗಳ ಹಿಂದೆಯೇ ತಮ್ಮ ಸಾಹಿತ್ಯದಲ್ಲಿ ಬಿಂಬಿಸಿದ ಡಾ. ಕೋಟ ಶಿವರಾಮ ಕಾರಂತರ ವಿಚಾರಧಾರೆ ಇಂದಿಗೂ ಪ್ರಸ್ತುತ. ಅವರ ಸಾಹಿತ್ಯ ಕ್ಷೇತ್ರದ ಕೊಡುಗೆಗಳು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ದೇಶದ ಇತರ ಭಾಗಗಳಿಗೂ ವಿಸ್ತರಿಸಬೇಕು ಎಂದು ಮ್ಯಾಗ್ಸೆಸ್ ಪ್ರಶಸ್ತಿ ಪುರಸ್ಕೃತ ಸೆಲ್ಕೋ ಇಂಡಿಯಾದ ಡಾ.ಎಚ್.ಹರೀಶ್ ಹಂದೆ ಹೇಳಿದ್ದಾರೆ.

ಕೋಟತಟ್ಟು ಗ್ರಾಮ ಪಂಚಾಯತ್ ಮತ್ತು ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಆಶ್ರಯದಲ್ಲಿ ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಸಹಯೋಗದಲ್ಲಿ ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ 10 ದಿನಗಳ ಕಾಲ ಹಮ್ಮಿಕೊಳ್ಳಲಾದ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ಹುಟ್ಟೂರ ಪ್ರಶಸ್ತಿಗೆ 13ನೆ ವರುಷದ ಸಂಭ್ರಮ ‘ತಂಬೆಲರು -2017’ನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಕ್ಕಳಿಗೆ ಮತ್ತು ಯುವ ಜನತೆಗೆ ನಮ್ಮ ಸಂಸ್ಕೃತಿ, ಸಾಹಿತ್ಯಕಾರರು ಮತ್ತು ಸಾಹಿತ್ಯಿವನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ಭವಿಷ್ಯದಲ್ಲಿ ನಡೆಸಲು ಯೋಜನೆ ರೂಪಿಸಬೇಕು. ಇದರಿಂದ ನಮ್ಮ ಸಾಹಿತಿಗಳು ಬೆಳೆಯುತ್ತಾರೆ ಎಂದು ಅವರು ಅಭಿಪ್ರಾಯ ಪಟ್ಟರು.

ಬ್ರಹ್ಮಾವರದ ಸಮಗ್ರ ಶಿಶು ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾದ ಅಂಗನ ವಾಡಿ ಪುಟಾಣಿಗಳ ಸಮಾವೇಶ ‘ಅಕ್ರೂಟ್- ಚಿಣ್ಣರ ಜಗುಲಿ’ಯನ್ನು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ.ಕುಂದರ್ ಚೆಂಡೆ ಬಡಿಯುವ ಮೂಲಕ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಪಂ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ, ಕಾರ್ಯದರ್ಶಿ ಮೀರಾ, ಸೆಲ್ಕೋ ಸಂಸ್ಥೆಯ ಗುರುಪ್ರಸಾದ್, ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ಸುಬ್ರಾಯ ಆಚಾರ್ಯ ಮಣೂರು, ಸಾಹಿತ್ಯಿಕ ಚಿಂತಕ ಡಾ.ಸೂರ್ಯನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಶಿಕ್ಷಕ ಸಾಹಿತಿ ನರೇಂದ್ರ ಕುಮಾರ್ ಕೋಟ ಗೌರವಾರ್ಪಣೆ ಕಾರ್ಯಕ್ರಮ ನೆರವೇರಿಸಿದರು.

ಕಲ್ಮಾಡಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೋಟ ಕಾರಂತ ಥೀಂ ಪಾರ್ಕ್‌ನ ಸೋಲಾರ್ ಘಟಕವನ್ನು, ಕಲ್ಮಾಡಿ ಅಂಗನವಾಡಿಗೆ ಟ್ಯಾಬ್ ವಿತರಿಸಿ, ಎಲ್‌ಸಿಡಿ ಪ್ರೊಜೆಕ್ಟರನ್ನು ಉದ್ಘಾಟಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News