ವೈವಿಧ್ಯತೆಯೇ ಪ್ರಜಾಪ್ರಭುತ್ವದ ಜೀವಾಳ: ಎ.ಸೂರ್ಯಪ್ರಕಾಶ್

Update: 2017-10-01 16:24 GMT

ಮಣಿಪಾಲ, ಅ.1: ವಿಶ್ವದಲ್ಲೇ ಭಾರತ ಅತ್ಯಂತ ಹೆಚ್ಚು ವೈವಿಧ್ಯತೆಯಿಂದ ಕೂಡಿದ ಸಮಾಜವನ್ನು ಹೊಂದಿದೆ. ವಿಶಾಲವಾದ ದೇಶದಲ್ಲಿ ಭಾಷೆ, ಧರ್ಮ, ಸಂಸ್ಕೃತಿ, ಕಲೆ, ರಾಜಕೀಯ ವೈವಿಧ್ಯತೆಯಿದೆ. ಈ ವೈವಿಧ್ಯತೆಯೇ ಭಾರತದ ಪ್ರಜಾಪ್ರಭುತ್ವದ ಜೀವಾಳವೆನಿಸಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಪ್ರಸಾರ ಭಾರತಿಯ ಅಧ್ಯಕ್ಷ ಡಾ.ಎ.ಸೂರ್ಯಪ್ರಕಾಶ್ ಹೇಳಿದ್ದಾರೆ.

ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಷನ್‌ನ ವತಿಯಿಂದ ಎಂ.ವಿ. ಕಾಮತ್ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ -ಮಾಧ್ಯಮಗಳು ಹಾಗೂ ಸೋಷಿಯಲ್ ಮೀಡಿಯಾ-ನೈತಿಕತೆ ಮತ್ತು ಜವಾಬ್ದಾರಿ- ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.

ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಮೊದಲು ಸ್ವಾತಂತ್ರ್ಯವೇ ಪತ್ರಿಕೆ ಹಾಗೂ ಪತ್ರಕರ್ತರ ಆದ್ಯತೆಯಾಗಿತ್ತು. ಅದಾದ ನಂತರ ನಮ್ಮ ಆದ್ಯತೆ, ಗುರಿ ಬದಲಾಯಿತು. ಆದರೂ ದೇಶದ ವೈವಿಧ್ಯತೆಗೆ ನಾವೆಂದೂ ಹೆದರಿದಿಲ್ಲ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ, ವೈವಿದ್ಯತೆಯೇ ದೇಶದ ಪ್ರಜಾಪ್ರಭುತ್ವದ ಕೇಂದ್ರ ಬಿಂದುವಾಯಿತು ಎಂದು ಅಭಿಪ್ರಾಯ ಪಟ್ಟರು.

ಪತ್ರಕರ್ತರು ಎಂದೂ ಜನಸಾಮಾನ್ಯರ ಧ್ವನಿಯಾಗಿರಬೇಕು. ನಿರ್ಭೀತತೆ ಪತ್ರಿಕೋದ್ಯಮದ ಪ್ರಧಾನ ಅಂಶವಾಗಿರಬೇಕು. ಜನಸಾಮಾನ್ಯರ ಒಳಿತೇ ಪತ್ರಕರ್ತರ ಮೂಲಮಂತ್ರವಾಗಿರಬೇಕು. ಇದಕ್ಕಾಗಿ ಆತ ಚುರುಕಾಗಿ ಕೆಲಸ ಮಾಡಬೇಕಾಗುತ್ತದೆ. ಯಾವುದೇ ವರದಿ ಬರೆಯುವಾಗ ಸಾರ್ವಜನಿಕರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡಿರಬೇಕು ಎಂದು ಅವರು ಪತ್ರಕರ್ತ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸ್ವಾತಂತ್ರ್ಯ ಪೂರ್ವದ ಹಾಗೂ ಸ್ವಾತಂತ್ರ್ಯಾ ನಂತರದ 50-80ರ ದಶಕದ ಪತ್ರಿಕಾರಂಗ ತನ್ನ ಮೂಲತತ್ವ, ಸಿದ್ಧಾಂತಗಳಿಗೆ ಪೂರಕವಾಗಿ ಕೆಲಸ ಮಾಡಿತ್ತು. ಆದರೆ ನಂತರದ ವರ್ಷಗಳಲ್ಲಿ ಮಾಧ್ಯಮಗಳು- ವಿಶೇಷತ: ಈ ಅವಧಿಯಲ್ಲಿ ಮುಂಚೂಣಿಗೆ ಬಂದ ಇಲೆಕ್ಟ್ರಾನಿಕ್ಸ್ ಮಾಧ್ಯಮಗಳು - ವೌಲ್ಯಗಳನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದವರು ಅಭಿಪ್ರಾಯಪಟ್ಟರು.

ದೇಶದಲ್ಲಿ ಇಂದು 1,10,851 ನೊಂದಾಯಿತ ವಿವಿಧ ಪ್ರಕಾರದ ಪತ್ರಿಕೆಗಳಿವೆ. ಹಿಂದಿ ಭಾಷೆಯಲ್ಲಿ 44,557, ಇಂಗ್ಲೀಷ್‌ನಲ್ಲಿ 14,083 ಹಾಗೂ ಕನ್ನಡದಲ್ಲಿ 4,885 ಪಬ್ಲಿಕೇಷನ್‌ಗಳಿವೆ. ಇಂಗ್ಲೀಷ್‌ಗೆ 65 ಲಕ್ಷ, ಹಿಂದಿಗೆ 314 ಮಿಲಿಯ, ಕನ್ನಡಕ್ಕೆ 6.5ಮಿಲಿಯ ಹಾಗೂ ಇತರ ಭಾಷೆಗಳಿಗೆ 224 ಮಿಲಿಯ ಓದುಗರಿದ್ದಾರೆ ಎಂದವರು ವಿವರಿಸಿದರು.

ದೇಶದ ಕೇಬಲ್ ಮತ್ತು ಸೆಟಲೈಟ್ ಚಾನೆಲ್‌ಗಳ ವೀಕ್ಷಕರ ಸಂಖ್ಯೆ 1991ರಲ್ಲಿ ಒಂದು ಮಿಲಿಯ ಆಗಿದ್ದರೆ, 1997ರಲ್ಲಿ 40, 2008ರಲ್ಲಿ 68, 2013ರಲ್ಲಿ 139, 2014ರಲ್ಲಿ 149 ಹಾಗೂ 2016ರಲ್ಲಿ 152 ಮಿಲಿಯಕ್ಕೇರಿದೆ. ಈ ಏರಿಕೆಗೆ ಹೆಚ್ಚುತ್ತಿರುವ ಸಾಕ್ಷರತೆ, ಏರಿಕೆಯಲ್ಲಿರುವ ಮಧ್ಯಮ ವರ್ಗ, ಆರ್ಥಿಕತೆಯ ದಾಪುಗಾಲು ಕಾರಣವೆಂದು ಹೇಳಲಾಗುತ್ತಿದೆ ಎಂದರು.

ಇನ್ನು ಹೊಸ ಮಾಧ್ಯಮಗಳ ಕುರಿತು ಹೇಳುವುದಾದರೆ, 2021ರ ಸುಮಾರಿಗೆ ದೇಶದಲ್ಲಿ ಅಂತರ್ಜಾಲ (ಇಂಟರ್‌ನೆಟ್) ಬಳಕೆದಾರರ ಸಂಖ್ಯೆ 829 ಮಿಲಿಯನ್ ಆಗುವ ಸಾಧ್ಯತೆ ಇದೆ. ಹೀಗಾಗಿ ನಮ್ಮ ಹಳೆಯ ಮಾಧ್ಯಮಗಳು, ಈ ಹೊಸ ಮಾಧ್ಯಮಗಳಿಗೆ ಹೊಂದಿಕೊಳ್ಳಲೇ ಬೇಕಾದ ಅಗತ್ಯವಿದೆ.

ಸುದ್ದಿಗಾಗಿ ಮೊಬೈಲ್ ಬಳಕೆ ಮಾಡುವವರ ಸಂಖ್ಯೆ 300ಮಿಲಿಯನ್ ಆಗಿದೆ. ಅದೇ ರೀತಿ ಫೇಸ್‌ಬುಕ್, ಯೂಟ್ಯೂಬ್, ವ್ಯಾಟ್ಸಪ್, ಟ್ವಿಟರ್ ಬಳಕೆದಾರರ ಸಂಖ್ಯೆಯೂ ಅಸಾಧಾರಣ ಏರಿಕೆಯನ್ನು ಕಾಣುತ್ತಿದೆ ಎಂದುಸೂರ್ಯಪ್ರಕಾಶ್ ವಿವರಿಸಿದರು.

ಇಂದು ಪತ್ರಿಕೆ ಹಾಗೂ ಟಿವಿಗಳಿಗಿಂತ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ವೇಗವಾಗಿ ಪ್ರಕಟಗೊಳ್ಳುತ್ತಿವೆ. ಆದರೆ ಸಾಮಾಜಿಕ ಜಾಲತಾಣಗಳಿಗೆ ಯಾರದೇ ನಿಯಂತ್ರಣವಿಲ್ಲದ ಕಾರಣ, ಸುದ್ದಿಗಳ ವಿಶ್ವಾಸಾರ್ಹತೆಗೆ ಕೊರತೆ ಇದೆ. ಅಲ್ಲದೇ ಈ ಮಾಧ್ಯಮವನ್ನು ಕೆಟ್ಟ ಉದ್ದೇಶಗಳಿಗೆ ಬಳಸಿಕೊಳ್ಳುವವರ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ. ಸುಳ್ಳು ಸುದ್ದಿಗಳು, ಗಾಸಿಪ್‌ಗಳು ಹಾಗೂ ನಿಂದನೆಗಳಿಗೆ ಇವುಗಳನ್ನು ಬಳಸುವವರ ಸಂಖ್ಯೆಯೂ ಅಗಾಧ ಪ್ರಮಾಣದಲ್ಲಿದೆ. ಹೀಗಾಗಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆಯಿಂದ ಬಳಸುವ ನಿರ್ಧಾರ ಕೈಗೊಳ್ಳಬೇಕು ಎಂದವರು ನುಡಿದರು.
ಇಂದು ಮಾಧ್ಯಮಗಳಿಗೆ ಅದರಲ್ಲೂ ವಿಶೇಷವಾಗಿ ದೃಶ್ಯ ಮಾಧ್ಯಮಗಳಿಗೆ ನಿಯಂತ್ರಣದ ಅಗತ್ಯವಿದೆ. ಇದು ಪತ್ರಿಕಾರಂಗದ ಒಳಗಿನಿಂದಲೇ ಮೂಡಿ ಬರಬೇಕಾಗಿದೆ ಎಂದು ಸೂರ್ಯಪ್ರಕಾಶ್ ಹೇಳಿದರು.

ಕಾರ್ಯಕ್ರಮದಲ್ಲಿ ಮಣಿಪಾಲ ವಿವಿಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಉಪಸ್ಥಿತರಿದ್ದರು. ಸ್ಕೂಲ್ ಆಫ್ ಕಮ್ಯುನಿಕೇಷನ್‌ನ ನಿರ್ದೇಶಕಿ ಡಾ.ನಂದಿನಿ ಲಕ್ಷ್ಮೀಕಾಂತ್ ಸ್ವಾಗತಿಸಿದರೆ, ಸಹ ನಿರ್ದೇಶಕಿ ಡಾ.ಪದ್ಮರಾಣಿ ಅತಿಥಿಗಳನ್ನು ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News