ಮೂರು ಕಾರುಗಳ ಗಾಜು ಒಡೆದು ಕಳವು
ಗಂಗೊಳ್ಳಿ, ಅ.1: ಮರವಂತೆ ಬೀಚ್ ಬಳಿ ನಿಲ್ಲಿಸಿದ ಮೂರು ಕಾರುಗಳ ಗಾಜನ್ನು ಒಡೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಇಂದು ನಡೆದಿದೆ.
ಬೀಚ್‌ಗೆ ವಿಹಾರಕ್ಕೆ ಬಂದಿದ್ದ ಬಂಟ್ವಾಳ ಮೂಲದ ಗಣೇಶ್ ಕಾಮತ್, ಸಂತೋಷ್ ನಾಯಕ್ ಹಾಗೂ ಮಡಿಕೇರಿ ಮೂಲದ ಬಿ.ಕೆ.ಸೂರ್ಯನಾರಾ ಯಣ ಎಂಬವರು ತಮ್ಮ ಕಾರುಗಳನ್ನು ರಾಷ್ಟ್ರೀಯ ಹೆದ್ದಾರಿ ಬಳಿ ನಿಲ್ಲಿಸಿ ಕುಟುಂಬದವರೊಂದಿಗೆ ಬೀಚ್‌ಗೆ ತೆರಳಿದ್ದರು.
ಈ ವೇಳೆ ಕಳ್ಳರು ಮೂರು ಕಾರುಗಳ ಗಾಜನ್ನು ಒಡೆದು ಕಾರಿನೊಳಗೆ ಇದ್ದ ಚಿನ್ನಾಭರಣ ಹಾಗೂ ಇತರ ಸೊತ್ತುಗಳನ್ನು ದೋಚಿದ್ದಾರೆ. ಒಟ್ಟು 13 ಪವನ್ ಚಿನ್ನ, ನಾಲ್ಕು ಮೊಬೈಲ್, 3,300 ರೂ. ನಗದು, ಎಟಿಎಂ ಕಾರ್ಡ್ ಕಳವಾಗಿದೆ ಎನ್ನಲಾಗಿದೆ. ಬೀಚಿಗೆ ತೆರಳಿದವರು ಬಳಿಕ ಕಾರಿನ ಬಳಿ ಬಂದು ನೋಡಿದಾಗ ಈ ಕಳವು ನಡೆದಿರುವುದು ತಿಳಿದುಬಂತು. ಈ ಕೃತ್ಯವನ್ನು ಒಂದೇ ತಂಡ ನಡೆಸಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.