ಅಭಿವ್ಯಕ್ತಿ ಸ್ವಾತಂತ್ರಕ್ಕೆ ಸಂಯಮದ ಸಂಕೋಲೆ ಸಹಜತೆಯ ಅತಿರೇಕ: ಶಿವಸುಂದರ್
ಮಂಗಳೂರು, ಅ.2: ಅಭಿವ್ಯಕ್ತಿ ಸ್ವಾತಂತ್ರಕ್ಕೆ ಸಂಯಮದ ಸಂಕೋಲೆಯನ್ನು ಹಾಕುವುದು ಸಹಜತೆಯ ಅತಿರೇಕ ಎಂದು ಚಿಂತಕ ಹಾಗೂ ಗೌರಿ ಲಂಕೇಶ್‌ರವರ ಒನಾಡಿ ಶಿವಸುಂದರ್ ಅಭಿಪ್ರಾಯಿಸಿದ್ದಾರೆ.
ನಗರದ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಇಂದು ಮಹಿಳಾ ದೌರ್ಜನ್ಯ ವೇದಿಕೆಯ ವತಿಯಿಂದ ಗೌರಿ ಲಂಕೇಶ್‌ರ ನೆನಪು ಮತ್ತು ಅಭಿವ್ಯಕ್ತಿ ಅವಲೋಕನ ಕಾರ್ಯಕ್ರಮದಲ್ಲಿ ಅವರು ‘ಪತ್ರಿಕೋದ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಂತೆ ಅಭಿಪ್ರಾಯಿಸಿದರು.
ಗೌರಿ ಲಂಕೇಶ್‌ರ ಹತ್ಯೆಯ ಬಳಿಕ ಸಾಕಷ್ಟು ಪರ ವಿರೋಧ ಹೇಳಿಕೆಗಳು ಸಮಾಜದಲ್ಲಿ ವ್ಯಕ್ತವಾಗಿವೆ. ಗೌರಿಯ ಬಗ್ಗೆ ಅಪಾರ ಗೌರವ ಹೊಂದಿದ್ದ ಚಂದ್ರಶೇಖರ ಪಾಟೀಲ್‌ರವರು ಸಂದರ್ಶನವೊಂದರಲ್ಲಿ ಕಲಬುರ್ಗಿ ಮತ್ತು ಗೌರಿಯವರು ಸಂಯಮ ತೋರಿದ್ದರೆ ಬದುಕಿರುತ್ತಿದ್ದರು ಎಂಬ ಹೇಳಿಕೆಯನ್ನು ನೀಡಿದ್ದಾರೆ. ಗೌರಿ ಹೃದಯಕ್ಕೆ ಕಿವಿಯಾಗಿದ್ದರು. ಅನ್ಯಾಯವಾದಾಗ ಅದರ ವಿರುದ್ಧ ಮಾತನಾಡುತ್ತಿದ್ದಾಕೆ. ಇದಕ್ಕೆ ಸಂಯಮ ಬೇಕು ಎಂದರೆ ಯಾವುದು ಸಹಜವೋ ಅದನ್ನು ಅತಿರೇಕಿಸಿದಂತೆ. ಒಂದು ವೇಳೆ ಗೌರಿ ತಮ್ಮ ಬರವಣಿಗೆಯಲ್ಲಿ ನಿಷ್ಠುರತೆಯನ್ನು ತೋರದಿದ್ದರೆ ಬದುಕಿರುತ್ತಿದ್ದರೇ ಎಂಬ ಪ್ರಶ್ನೆಗೆ ಗಾಂಧಿಯನ್ನು ಯಾಕೆ ಕೊಂದರು, ಅವರೇನು ಬರೆದರು ಎಂಬ ಪ್ರಶ್ನೆಗೆ ಉತ್ತರ ಹುಡುಕಿಕೊಳ್ಳಬೇಕಾಗುತ್ತದೆ ಎಂದವರು ಹೇಳಿದರು.
ಕಳೆದ 10 ವರ್ಷಗಳಲ್ಲಿ ವಿಚಿತ್ರ ವಿದ್ಯಮಾನ ದೇಶದಲ್ಲಿ ನಡೆಯುತ್ತಿದ್ದು, ಕೊಲೆಗಾರನಿಲ್ಲದೆಯೂ ಕೊಲೆ ಸಂಭವಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸತ್ಯವನ್ನು ಬಯಲು ಮಾಡುವವರನ್ನು, ಪಟ್ಟಭದ್ರ ಹಿತಾಸಕ್ತಿಗಳಿಗೆ ಆತಂಕವನ್ನು ಸೃಷ್ಟಿಸುವವರನ್ನು ಕೊಲ್ಲಲಾಗುತ್ತದೆ, ಬೆದರಿಸುವ ಪ್ರಯತ್ನ ನಡೆಸಲಾಗುತ್ತಿದೆ. ವಿಚಿತ್ರ ರೀತಿಯ ಭ್ರಾಂತಿ ಮತ್ತು ಭೀತಿ ನಮ್ಮನ್ನಿಂದು ಆಳುತ್ತಿದೆ ಎಂದು ಅವರು ವಿಶ್ಲೇಷಿಸಿದರು.
ಗೌರಿಗೂ ಮಾಕ್ಸ್‌ವಾದಕ್ಕೂ ಸಂಬಂಧವೇ ಇಲ್ಲ
ಗೌರಿಯನ್ನು ನಾನು ಅತ್ಯಂತ ಹತ್ತಿರದಿಂದ ಬಲ್ಲವನು. ಗೌರಿಗೂ ಮಾಕ್ಸ್‌ವಾದಕ್ಕೂ ಸಂಬಂಧವೇ ಇಲ್ಲ. ಮಾನವೀಯತೆ, ಸಹಜವಾದದನ್ನು, ಕಂಡಿದ್ದನ್ನು ಕಂಡ ಹಾಗೆ ಬರೆಯುತ್ತಿದ್ದ ಗೌರಿಯನ್ನು ಲೆಫ್ಟಿಸ್ಟ್, ನಕ್ಸಲ್‌ವಾದಿ ಎಂದು ಕರೆಯುವುದು ಸಮಾಜದಲ್ಲಿ ನೈತಿಕತೆಯ ಅಧ:ಪತನ ಎಂದು ಶಿವಸುಂದರ್ ವ್ಯಾಖ್ಯಾನಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಅಭಿವ್ಯಕ್ತಿಯ ಆಯಾಮಗಳು ಎಂಬ ವಿಷಯದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಹರ್ಷಕುಮಾರ್ ಕುಗ್ವೆ, ಮಾನವೀಯ ಅಂತ:ಕರಣದವರನ್ನು, ಸರಕಾರದ ವಿರುದ್ಧ ಪ್ರತಿರೋಧದ ಧ್ವನಿ ಎತ್ತುವವರನ್ನು ಗುರಿ ಮಾಡಲಾಗುತ್ತಿದೆ. ಆದರೆ ವಿಚಾರಗಳನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸತ್ಯವನ್ನು ಯಾರಿಂದಲೂ ಮರೆಮಾಚಲಾಗದು ಎಂದರು.
ಸಂತ ಅಲೋಶಿಯಸ್ ಕಾಲೇಜಿನ ಫಾ. ಪ್ರವೀಣ್ ಮಾರ್ಟಿಸ್ ಉಪಸ್ಥಿತರಿದ್ದು, ಮಾತನಾಡಿದರು. ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಸ್ವಾಗತಿಸಿದರು. ಲೇಖಕಿ ಚಂದ್ರಕಲಾ ನಂದಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಲಾಬಿ ಬಿಳಿಮಲೆ ಕಾರ್ಯಕ್ರಮ ನಿರೂಪಿಸಿದರು.
ಜೀವನ ಪ್ರೀತಿಗೆ ಇನ್ನೊಂದು ಹೆಸರು ಗೌರಿ: ಡಾ. ಸಬಿಹಾ
ಗೌರಿ ಜತೆಗಿನ ಸಂವಾದ ಪಯಣವಿದ್ದಂತೆ. ಜೀವನ ಪ್ರೀತಿಗೆ ಇನ್ನೊಂದು ಹೆಸರೇ ಗೌರಿ. ಗೌರಿಗೆ ಯಾವ ಎಲ್ಲೆಗಳೂ ಇರಲಿಲ್ಲ ಎಂದು ಗೌರಿ ಲಂಕೇಶ್‌ರನ್ನು ನೆನಪು ಮಾಡಿಕೊಂಡ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ. ಸಬಿಹಾ ಭೂಮೀಗೌಡ ಅಭಿಪ್ರಾಯಿಸಿದರು.
ಗೌರಿಯದ್ದು ಸಂತಸಕ್ಕೆ ಸಮೀಪದ ಬದುಕು. ತನ್ನ ಸಮೀಪಕ್ಕೆ ಬಂದವರಿಗೆ ಪ್ರೀತಿ ತೋರಿಸಿದಾಕೆ ಗೌರಿ, ಗೌರಿ ಬೆಳೆಸಿದ, ರೂಪಿಸಿದ ಲೇಖಕರ ತಂಡು ಬಹಳಷ್ಟಿದ್ದು ಅವರೆಲ್ಲರ ಬರಹಗಳಲ್ಲಿ ಗೌರಿ ಉಸಿರಾಡುತ್ತಿದ್ದಾಳೆ. ಗೌರಿ ತಳ ಸಮುದಾಯದವರ ಬಗ್ಗೆ ತೋರಿಸುತ್ತಿದ್ದ ಕಾಳಜಿಯಲ್ಲಿ ಕೃತಕತೆ ಇರಲಿಲ್ಲ. ತನ್ನ ಬದುಕು ಮತ್ತು ಆಯ್ಕೆ ಬಗ್ಗೆ ಸ್ಪಷ್ಟೆಯನ್ನು ಗೌರಿ ಹೊಂದಿದ್ದು, ಗೌರಿಯನ್ನು ಇಲ್ಲವಾಗಿಸಲು ಸಾಧ್ಯವಿಲ್ಲ ಎಂದವರು ಹೇಳಿದರು.