×
Ad

ಉಡುಪಿ: ಮಾತೃಪೂರ್ಣ ಯೋಜನೆಗೆ ಪ್ರಮೋದ್ ಚಾಲನೆ

Update: 2017-10-02 19:35 IST

ಉಡುಪಿ, ಅ.2: ರಾಜ್ಯಾದ್ಯಂತ ಇಂದು ಪ್ರಾರಂಭಗೊಂಡ ರಾಜ್ಯ ಸರಕಾರದ ನೂತನ ಮಹತ್ವಾಕಾಂಕ್ಷಿ ಯೋಜನೆಯಾದ ಮಾತೃಪೂರ್ಣ ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ನಗರದ ಬೋರ್ಡ್ ಹೈಸ್ಕೂಲ್‌ನಲ್ಲಿ ಚಾಲನೆ ನೀಡಿದರು.

ದೀಪ ಬೆಳಗಿಸುವ ಮೂಲಕ ಮಾತೃಪೂರ್ಣ ಯೋಜನೆಯನ್ನು ಉದ್ಘಾಟಿಸಿದ ಪ್ರಮೋದ್ ಬಳಿಕ ತಟ್ಟೆಗೆ ಅನ್ನ, ಸಾರು, ಪಲ್ಯಗಳು, ಮೊಟ್ಟೆ ಹಾಗೂ ಚಿಕ್ಕಿಯನ್ನು ಬಡಿಸುವ ಹಾಗೂ ಲೋಟದಲ್ಲಿ ಹಾಲನ್ನು ನೀಡುವ ಮೂಲಕ ಗರ್ಭಿಣಿ ಹಾಗು ಬಾಣಂತಿಯರಿಗೆ ಪೌಷ್ಠಿಕ ಬಿಸಿಯೂಟ ಕಾರ್ಯಕ್ರಮವನ್ನೂ ಉದ್ಘಾಟಿಸಿದರು.

ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ತಡೆಗಟ್ಟುವ ಹಾಗೂ ಗರ್ಭಿಣಿ, ಬಾಣಂತಿ ಯರಿಗೆ ಸತ್ವಶಾಲಿ, ಪೌಷ್ಠಿಕ ಆಹಾರವನ್ನು ಒದಗಿಸುವ ಮೂಲಕ ಅವರ ಆರೋಗ್ಯವನ್ನು ಉತ್ತಮಪಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ದೇಶದಲ್ಲೇ ಅತೀ ಕಡಿಮೆ ಶಿಶು ಮರಣ ಹಾಗೂ ತಾಯಿ ಮರಣವನ್ನು ಹೊಂದಿರುವ ಉಡುಪಿ ಜಿಲ್ಲೆಯಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಇದನ್ನು ವಿಸ್ತರಿಸಲು ಮಕ್ಕಳು ಮತ್ತು ಗರ್ಭಿಣಿಯರಿಗೆ ಮೊಟ್ಟೆ, ಹಾಲು ಸಹಿತ ಪೌಷ್ಠಿಕ ಆಹಾರವನ್ನು ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದವರು ಹೇಳಿದರು.

ಅಪೌಷ್ಠಿಕತೆಯಿಂದ ಬಳಲುವ ಮಗು ಹಾಗೂ ಕಡಿಮೆ ತೂಕದ ಮಗುವಿನ ಜನನವನ್ನು ತಡೆಗಟ್ಟಲು, ಗರ್ಭಿಣಿಯರಿಗೆ ಪೌಷ್ಠಿಕ ಆಹಾರವನ್ನೊಳಗೊಂಡ ಬಿಸಿಯೂಟವನ್ನು ಅವರ ಪ್ರದೇಶದ ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತದೆ ಎಂದು ಪ್ರಮೋದ್ ನುಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ನಾಲ್ಕು ವರ್ಷಗಳಿಗೂ ಅಧಿಕ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ ಅನೇಕ ಕ್ರಾಂತಿಕಾರಿ ಹಾಗೂ ದೂರದೃಷ್ಟಿಯ ಕಾರ್ಯಕ್ರಮಕ್ಕೆ ಮಾತೃಪೂರ್ಣ ಯೋಜನೆ ಹೊಸ ಸೇರ್ಪಡೆ ಯಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ರೋಹಿಣಿ, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗೇಶ್ ಶ್ಯಾನುಭಾಗ್, ನಿರಂಜನ್ ಭಟ್ ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವೀಸ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ವಂದಿಸಿದರೆ, ಉಡುಪಿ ವಲಯ ಮೇಲ್ವಿಚಾರಕಿ ಮೀರಾಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಗರ್ಭಿಣಿ, ಬಾಣಂತಿಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೆಳಗ್ಗೆ 11:00ರಿಂದ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News