ಭಟ್ಕಳ: ಎಕ್ಸ್ ಪ್ರೆಸ್ ರೈಲು ನಿಲುಗಡೆ ಬೇಡಿಕೆ; ರೈಲ್ವೆ ಇಲಾಖೆಗೆ ಶಿಫಾರಸ್ಸು- ಹಾಶಿಮ್ ಸುಲೈಮಾನ್
ಭಟ್ಕಳ, ಅ.2: ಇಲ್ಲಿನ ಜನರ ಬೇಡಿಕೆಗೆಯನ್ನು ಪರಿಗಣಿಸಿ 2-3 ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ರೈಲು ಇಲಾಖೆಗೆ ಶಿಫಾರಸ್ಸು ಮಾಡಲಾಗುವುದೆಂದು ಕೊಂಕಣ ರೇಲ್ವೆ ವಿಭಾಗೀಯ ವ್ಯವಸ್ಥಾಪಕ ಮುಹಮ್ಮದ್ ಹಾಶಿಮ್ ಸುಲೈಮಾನ್ ಹೇಳಿದರು.
ಅವರು ಭಟ್ಕಳದ ರೈಲು ನಿಲ್ದಾಣದ ಅಭಿವೃದ್ಧಿಗೆ ಸಂಬಂಧಿಸಿದ್ದಂತೆ ರೇಲ್ವೆ ನಿಲ್ದಾಣದ ಬಳಿ ಇರುವ ಸಭಾಭವನದಲ್ಲಿ ನೆರೆದ ಸಭೆಯಲ್ಲಿ ಮಾತನಾಡಿದರು.
ತಾಲೂಕಿನ ಎನ್.ಜಿ.ಒ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಇಲ್ಲಿನ ರೈಲು ನಿಲ್ದಾಣದ ಅಭಿವೃದ್ಧಿ ಕುರಿತಂತೆ ಆಸಕ್ತಿ ವಹಿಸಿದ್ದು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ಇವುಗಳನ್ನು ಪರಿಗಣಿಸಿ ಅಗತ್ಯ ಅಭಿವೃದ್ಧಿ ಕ್ರಮಗಳನ್ನು ಜರಗಿಸಲಾಗುವುದು, ಪ್ಲಾಟ್ ಫಾರ್ಮ್ 2ರಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಆಸನಗಳ ವ್ಯವಸ್ಥೆ, ಕುಡಿಯುವ ನೀರು, ಅಲ್ಲದೆ ಅಗತ್ಯಕ್ಕೆ ತಕ್ಕಂತೆ ಇನ್ನೊಂದು ಪ್ಲಾಟ್ ಫಾರ್ಮ್ ನಿರ್ಮಾಣ ಮಾಡುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಾಗಳನ್ನು ಮಳೆಗಾಲ ಮುಗಿದ ಕೂಡಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಭಟ್ಕಳ ರೇಲ್ವೆ ನಿಲ್ದಾಣವನ್ನು ಮಾದರಿ ನಿಲ್ದಾಣವನ್ನಾಗಿ ಮಾಡಲು ಸರ್ಕಾರೇತರ ಸಂಸ್ಥೆಗಳು ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದು ರೇಲ್ವೆ ಇಲಾಖೆಗೆ ಸ್ಪೂರ್ತಿ ನೀಡಿದೆ ಎಂದು ಇಲ್ಲಿನ ಸಾಮಾಜಿಕ ಕಾರ್ಯಕರ್ತರು ಹಾಗೂ ಸರ್ಕಾರೇತರ ಸಂಸೆ್ಥಗಳ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕೊಂಕಣ ರೇಲ್ವೆ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಶ್ರೀಧರ್ ಭಟ್, ಸ್ಟೇಷನ್ ಮಾಸ್ಟರ್ ಕೆ.ಎಸ್.ಎನ್ ಮೂತಿ, ಸಮಾಜ ಸೇವಕ ಸೈಯದ್ ಹಸನ್ ಬರ್ಮಾವರ್, ನಝೀರ್ ಕಾಶಿಮಜಿ, ಕೃಷ್ಣಾನಂದ ಪ್ರಭು, ಸತೀಶ್ ನಾಯ್ಕ, ಎ.ಎನ್.ಪೈ ಮುಂತಾದವರು ಉಪಸ್ಥಿತರಿದ್ದರು.