ಬೆಳ್ತಂಗಡಿ: ಜನಜಾಗೃತಿ ಸಮಾವೇಶ, ಪಾನಮುಕ್ತರ ಅಭಿನಂದನಾ
ಬೆಳ್ತಂಗಡಿ, ಅ. 2: ದೇಶದಲ್ಲಿನ ಬಹುತೇಕ ಸಮಸ್ಯೆಗಳಿಗೆ ಮುಖ್ಯ ಕಾರಣ ಮದ್ಯವಾಗಿದ್ದು, ಮದ್ಯವನ್ನು ಪೂರ್ಣವಾಗಿ ನಿಷೇಧಿಸಿದರೆ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಕಾಣಬಹುದಾಗಿದ್ದು ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಯತ್ನಿಸಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ದಿಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಹೆಚ್ಚ ಮಂಜುನಾಧ್ ಹೇಳಿದರು.
ಅವರು ಬೆಳ್ತಂಗಡಿಯ ಮಂಜುನಾಧ ಕಲಾಭವನದಲ್ಲಿ ಸೋಮವಾರ ದರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಬೆಳ್ತಂಗಡಿ ತಾಲೂಕು ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಬೆಳ್ತಂಗಡಿ ತಾಲೂಕು ಸಮಿತಿಯ ವತಿಯಿಂದ ಗಾಂಧಿಜಯಂತಿಯ ಸಂಭ್ರಮಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ಸಮಾವೇಶ ಮತ್ತು ಪಾನಮುಕ್ತರ ಅಭಿನಂದನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.
ಸ್ವಾತಂತ್ರ್ಯಾ ನಂತರ ಭಾರತ ತುಂಬಾ ಬೆಳೆದಿದೆ ಹಸಿವಿಮುಕ್ತ ರಾಜ್ಯ ನಿರ್ಮಾಣವಾಗಿದೆ ಆದರೆ ಗಾಂಧಿ ಕಂಡ ರಾಮರಾಜ್ಯ ನಿರ್ಮಾಣ ಸಾಧ್ಯವಾಗಿಲ್ಲ. ಸಮಾಜದಲ್ಲಿ ಅಸಹನೆ ಅಶಾಂತಿ ಬೆಳೆಯುತ್ತಿದೆ ದುಶ್ಚಟಗಳನ್ನು ಹೆಮ್ಮೆಯೆಂದು ಸ್ವೀಕರಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾಜಕ್ಕೆ ಹಾನಿಕಾರಕವಾಗಿರುವ ಮದ್ಯವನ್ನು ನಿಷೇಧಿಸುವ ಅಗತ್ಯವಿದೆ. ಇದಕ್ಕೆ ಸರಕಾರಗಳು ಧೈರ್ಯ ತೋರಿಸಬೇಕಾಗಿದೆಮುಂದಿನ ಚುನಾವಣೆಯಲ್ಲಿ ಜನಜಾಗೃತಿ ವೇದಿಕೆ ಸಂಪೂರ್ಣ ಪಾನನಿಷೇಧದ ಬೇಡಿಕೆಯನ್ನು ಮುಂದಿಡಲಿದೆ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಅದನ್ನು ಸೇರಿಸಬೇಕು ಎಂದು ಒತ್ತಾಯಿಸಿದರು.
ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಿದ ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮ ಮಾತನಾಡಿ ಗಾಂಧಿಜಯಂತಿಯನ್ನು ದೇಶದಾಧ್ಯಂತ ಸ್ಮರಿಸುತ್ತಾರೆ ಆದರೆ ಅರ್ಹತೆಯಿದ್ದು ನಡೆಯುವ ಗಾಂಧಿ ಜಯಂತಿಯ ಕಾರ್ಯಕ್ರಮ ಇದಾಗಿದೆ. ಗಾಂಧಿಯವರ ಕನಸಾಗಿದ್ದ ಮದ್ಯ ಮುಕ್ತ ಭಾರತದ ನಿರ್ಮಾಣ ಕಾರ್ಯ ಇಲ್ಲಿ ಆರಂಭವಾಗುತ್ತಿದೆ. ಮದ್ಯ ಕುಟುಂಬಗಳನ್ನು ಸರ್ವನಾಶಗೊಳಿಸುತ್ತದೆ. ಎಂದಿಗೂ ಒಳಿತನ್ನು ತರದ ಮದ್ಯವನ್ನು ಯಾಕೆ ನಿಷೇಧಿಸಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಕೆ ವಸಂತ ಬಂಗೇರ ವಹಿಸಿ ಮಾತನಾಡಿ ನಾವು ಬಡತನವೆಂಬ ಭಾವನೆಯಿಂದ ಹೊರಬರಬೇಕು ಎಲ್ಲ ಮಕ್ಕಳಿಗೂ ಶಿಕ್ಷಣ ನೀಡಬೇಕು ಆಮೂಲಕ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದರು. ಮದ್ಯ ಮುಕ್ತ ಸಮಾಜವೆಂಬ ಕಲ್ಪನೆಯೊಂದಿಗೆ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧದ ಬೇಡಿಕೆಯನ್ನು ಜನಜಾಗೃತಿ ವೇದಿಕೆಯವರು ಮುಂದಿಟ್ಟಿದ್ದಾರೆ ಅದನ್ನು ಈಡೇರಿಸಲು ವೇದಿಕೆಯ ವತಿಯಿಂದ ಸಲ್ಲಿಕೆಯಾಗಿರುವ ಮನವಿಯನ್ನು ಮುಖ್ಯಮಂತ್ರಿಯವರಿಗೆ ನೀಡುತ್ತೇನೆ ಹಾಗೂ ಈ ಬಗ್ಗೆ ವಿಧಾನ ಸಭೆಯ ಅಧಿವೇಶನದಲ್ಲಿಯೂ ಪ್ರಸ್ತಾಪ ಮಾಡಿ ಸರಕಾರದ ಗಮನ ಸೆಳೆಯುತ್ತೇನೆ ಎಂದರು.
ಮುಖ್ಯ ಅತಿಧಿಗಳಾಗಿ ಆಗಮಿಸಿದ್ದ ಬಿಜೆಪಿ ಯುವ ಮೋರ್ಛಾ ಜಿಲ್ಲಾ ಅಧ್ಯಕ್ಷ ಹರೀಶ್ ಪೂಂಜ, ಜಾತ್ಯಾತೀತ ಜನತಾದಳದ ತಾಲೂಕು ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್ ಮಾತನಾಡಿ ತಮ್ಮ ಪಕ್ಷದ ಮುಖಂಡರುಗಳ ಗಮನಕ್ಕೆ ತಂದು ರಾಜ್ಯದಲ್ಲಿ ಸಂಪೂರ್ಣ ಪಾನನಿಷೇಧ ತರಲು ಪ್ರಯತ್ನಿಸುವುದಾಗಿ ತಿಳಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ ಪ್ಯಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದಾಧ್ಯಂತ ಮದ್ಯದ ಹಾಗೂ ಮಾದಕ ದ್ರವ್ಯಗಳ ವಿರುದ್ದದ ಸಂದೇಶವನ್ನು ಹತ್ತುಲಕ್ಷ ಮಂದಿಗೆ ಇಂತಹ ಸಮಾವೇಶಗಳ ಮೂಲಕ ತಲುಪಿಸಲಾಗುತ್ತಿದೆಎಂದು ತಿಳಿಸಿದರು. ಪಾನಮುಕ್ತ ನವಜೀವನ ಸಮಿತಿ ಸದಸ್ಯ ತನಿಯಪ್ಪ ವೇಣೂರು ತನ್ನ ಜೀವನಾನುಭವವನ್ನು ವಿವರಿಸಿದರು. ಉತ್ತಮ ಕಾರ್ಯ ಮಾಡಿದ ನವಜೀವನ ಸಮಿತಿ ಸದಸ್ಯರುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಬದಲ್ಲಿ ಮೂರು ರಾಜಕೀಯ ಪಕ್ಷಗಳ ಮುಖಂಡರುಗಳಿಗೆ ರಾಜ್ಯವನ್ನು ಸಂಪೂರ್ಣ ಮದ್ಯಮುಕ್ತವಾಗಿಸುವನಿಟ್ಟಿನಲ್ಲಿ ಸಂಪೂರ್ಣ ಮದ್ಯ ನಿಷೇಧ ತರುವಂತೆ ಒತ್ತಾಯಿಸುವ ಮನವಿಗಳನ್ನು ಸಲ್ಲಿಸಲಾಯಿತು.
ವೇದಿಕೆಯಲ್ಲಿ ಜನಜಾಗೃತಿವೇದಿಕೆಯ ಮಾಜಿ ಅಧ್ಯಕ್ಷರುಗಳಾದ ವಸಂತಸಾಲಿಯಾನ್, ಪ್ರತಾಪಸಿಂಹ ನಾಯಕ್, ಅಡೂರು ವೆಂಕಟರಾವ್, ತಿಮ್ಮಪ್ಪಗೌಡ ಬೆಳಾಲು, ಪಿ.ಕೆ ರಾಜುಪೂಜಾರಿ, ಡಿ.ಎ ರಹಿಮಾನ್ ಗ್ರಾಮಾಭಿವೃದ್ದಿ ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷ ಪ್ರಬಾಕರ ಶೆಟ್ಟಿ ಪೊಸಂದೋಡಿ, ವೇದಿಕೆಯ ವಲಯಾಧ್ಯಕ್ಷರುಗಳು ಹಾಗೂ ಇತರರು ಉಪಸ್ಥಿತರಿದ್ದರು.
ಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಬೇಬಿ ಚೆರಿಯಾನ್ ಸ್ವಾಗತಿಸಿದರು, ಉಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ಯೋಜನಾಧಿಕಾರಿ ಜಯಶಂಕರ ಶೆಟ್ಟಿ ವಂದಿಸಿದರು.