ಭಾರತದಲ್ಲಿ ಸುಳ್ಳುಸುದ್ದಿಗಳು ದುಬಾರಿಯಷ್ಟೇ ಅಲ್ಲ, ಮಾರಣಾಂತಿಕವೂ ಹೌದು: ವಿದೇಶಿ ಮಾಧ್ಯಮಗಳು
ಹೊಸದಿಲ್ಲಿ,ಅ.2: ಕಳೆದ ಸೆ.20ರಂದು ಸಂಜೆ ‘ಫ್ಯಾನ್ ಚಂಡಮಾರುತ ನಗರವನ್ನು ಅಪ್ಪಳಿಸಲಿದೆ’ ಎಂಬ ಸಂದೇಶ ಮುಂಬಯಿಗರ ಮೊಬೈಲ್ ಫೋನ್‌ಗಳಲ್ಲಿ ಹರಿದಾಡ ತೊಡಗಿತ್ತು. ಭಯಭೀತರಾದ ಜನರು ಚಂಡಮಾರುತ ಅಪ್ಪಳಿಸುವ ಮೊದಲೇ ಸುರಕ್ಷಿತವಾಗಿ ಮನೆಗಳನ್ನು ಸೇರಿಕೊಳ್ಳುವ ಧಾವಂತದಲ್ಲಿದ್ದರೆ, ಹಲವರು ಚಂಡಮಾರುತ ಹಾದು ಹೋಗುವ ಪ್ರದೇಶಗಳಲ್ಲಿಯ ತಮ್ಮ ಪ್ರೀತಿಪಾತ್ರರಿಗೆ ಈ ಸಂದೇಶಗಳನ್ನು ಫಾರ್ವರ್ಡ್ ಮಾಡತೊಡಗಿದ್ದರು. ಇದ್ದುದರಲ್ಲಿಯೇ ಬುದ್ಧಿವಂತರಾದ ಕೆಲವರು ಹಮಾಮಾನ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ ವಿಚಾರಿಸಿದಾಗ ಇದೊಂದು ಕೇವಲ ವದಂತಿ ಎನ್ನುವುದು ಬೆಳಕಿಗೆ ಬಂದಿತ್ತು. ಅಂದು ಸಂಜೆ ಫ್ಯಾನ್ ಚಂಡಮಾರುತ ಮುಂಬೈ ನಗರವನ್ನು ಅಪ್ಪಳಿಸಿರಲೇ ಇಲ್ಲ!
ಭಾರತದಲ್ಲಿ ಸುಳ್ಳುಸುದ್ದಿಗಳು ದುಬಾರಿಯಷ್ಟೇ ಅಲ್ಲ,ಮಾರಣಾಂತಿಕವೂ ಹೌದು ಎಂದು ದಿ ವಾಷಿಂಗ್ಟನ್‌ಪೋಸ್ಟ್ ಸೇರಿದಂತೆ ವಿದೇಶಿ ಮಾಧ್ಯಮಗಳು ಹೇಳಿವೆ.
ವಾಸ್ತವದಲ್ಲಿ ಫ್ಯಾನ್ ಚಂಡಮಾರುತ ಎಂಟು ವರ್ಷಗಳ ಮೊದಲೇ ಶ್ರೀಲಂಕಾದಲ್ಲಿ ಹಾವಳಿ ನಡೆಸಿತ್ತು. ಆ ಚಂಡಮಾರುತದ ವದಂತಿ ಈಗಲೂ ಹರಿದಾಡುತ್ತಿದೆ ಎಂದು ಭಾರತದಲ್ಲಿ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಹರಿದಾಡುವ ವದಂತಿಗಳ ಜಾಡು ಪತ್ತೆ ಹಚ್ಚುತ್ತಿರುವ ಜಾಲತಾಣವೊಂದರ ಸ್ಥಾಪಕ ಪಂಕಜ ಜೈನ ಹೇಳಿದರು.
ಅಮೆರಿಕದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ವಿಜಯ ಸುಳ್ಳುಸುದ್ದಿ ಗಳಿಗೆ ಕಾರಣವಾಗಿದ್ದರೆ, 355 ಮಿಲಿಯನ್ ನೆಟಿಜನ್‌ಗಳಿರುವ ಭಾರತದಲ್ಲಿ ಹವಾಮಾನ ಬಿಕ್ಕಟ್ಟನ್ನು ಉತ್ಪ್ರೇಕ್ಷಿಸುವ, ಜಾತಿಗಳು ಮತ್ತು ಧರ್ಮಗಳ ನಡುವೆ ಹಿಂಸಾಚಾರವನ್ನು ಹೆಚ್ಚಿಸುವ, ಅಷ್ಟೇ ಏಕೆ....ಸಾರ್ವಜನಿಕ ಸೌಹಾರ್ದತೆಗೆ ಭಂಗವನ್ನುಂಟು ಮಾಡುವ ಸುಳ್ಳುಸುದ್ದಿಗಳು ನಮ್ಮ ದೈನಂದಿನ ಜೀವನದ ಭಾಗವಾಗಿ ಬಿಟ್ಟಿವೆ.
ಸಾಮಾನ್ಯ ಪ್ರಜ್ಞೆ ಎನ್ನುವುದೇ ಕಳೆದು ಹೋಗಿದೆ. ಜನರು ಏನನ್ನು ಬೇಕಾದರೂ ನಂಬಲು ಸಿದ್ಧರಾಗಿದ್ದಾರೆ ಎಂದು ಜೈನ್ ಹೇಳಿದರು.
ಕಳೆದ ವಾರ ಸುಳ್ಳುಸುದ್ದಿಗಳನ್ನು ಹೇಗೆ ಪತ್ತೆ ಹಚ್ಚುವುದು ಎಂಬ ಬಗ್ಗೆ ವಿವರಗಳಿದ್ದ ಫೇಸ್‌ಬುಕ್‌ನ ಒಂದು ಪುಟದ ಜಾಹೀರಾತುಗಳನ್ನು ವೃತ್ತಪತ್ರಿಕೆಗಳು ಪ್ರಕಟಿಸಿದ್ದವು. ಗೃಹಸಚಿವ ರಾಜನಾಥ ಸಿಂಗ್ ಅವರು ಇತ್ತೀಚಿಗೆ ದಿಲ್ಲಿಯಲ್ಲಿ ಗಡಿ ರಕ್ಷಣಾ ಪಡೆಗಳನ್ನು ಉದ್ದೇಶಿಸಿ ಮಾತನಾಡುತ್ತ ಸಾಮಾಜಿಕ ಮಾಧ್ಯಮಗಳಲ್ಲಿಯ ಎಲ್ಲವನ್ನೂ ನಂಬದಂತೆ ಕಿವಿಮಾತು ಹೇಳಿದ್ದರು.
ಭಾರತದಲ್ಲಿ ಹೆಚ್ಚಿನ ಸುಳ್ಳುಸುದ್ದಿಗಳು ವಾಟ್ಸಾಪ್‌ನಿಂದ ಹರಡುತ್ತಿವೆ. ಕಳೆದ ವರ್ಷದ ನವಂಬರ್‌ನಲ್ಲಿ ನೋಟು ಅಮಾನ್ಯದ ಬಳಿಕ ಹರಡಿದ್ದ ವಾಟ್ಸಾಪ್ ಸಂದೇಶವೊಂದು ಸರಕಾರವು ಹೊಸದಾಗಿ ಬಿಡುಗಡೆಗೊಳಿಸಲಿರುವ 2,000 ರೂ.ನೋಟು ಜಿಪಿಎಸ್ ಚಿಪ್ ಒಳಗೊಂಡಿದ್ದು, ಭೂಮಿಯಲ್ಲಿ 390 ಅಡಿ ಆಳದವರೆಗೂ ಬಚ್ಚಿಟ್ಟಿರುವ ನೋಟು ಗಳನ್ನು ಪತ್ತೆ ಹಚ್ಚುತ್ತದೆ ಎಂದು ‘ಎಚ್ಚರಿಕೆ’ಯನ್ನು ನೀಡಿತ್ತು. ಕಳೆದ ನವಂಬರ್‌ನಲ್ಲಿ ಉಪ್ಪಿನ ಕೊರತೆಯ ಕುರಿತ ಸಂದೇಶದಿಂದಾಗಿ ನಾಲ್ಕು ರಾಜ್ಯಗಳಲ್ಲಿಯ ಜನರು ಉಪ್ಪಿನ ಖರೀದಿಗಾಗಿ ಮುಗಿಬಿದ್ದಿದ್ದರು. ಇವು ಇಂತಹ ಕಿಡಿಗೇಡಿ ಸಂದೇಶಗಳ ಎರಡು ಉದಾಹರಣೆಗಳಷ್ಟೇ.
ಹಲವಾರು ವದಂತಿಗಳು ಹಿಂಸಾಚಾರಕ್ಕೆ ಕಾರಣವಾಗಿವೆ. ಜಾರ್ಖಂಡ್‌ನಲ್ಲಿ ಮಕ್ಕಳ ಅಪಹರಣಕಾರರೆಂದು ಭಾವಿಸಿ ಉದ್ರಿಕ್ತ ಗುಂಪುಗಳು ಏಳು ಜನರನ್ನು ಥಳಿಸಿ ಹತ್ಯೆಗೈದು ದರ ಹಿಂದೆ ವಾಟ್ಸಾಪ್ ಸಂದೇಶಗಳು ಕೆಲಸ ಮಾಡಿದ್ದವು. ಭಾರತದಲ್ಲಿ ಹೆಚ್ಚುತ್ತಿರುವ ಕೋಮು ಮತ್ತು ಜಾತಿ ಉದ್ವಿಗ್ನತೆಗಳು ಹಲವು ಸಂದೇಶಗಳಿಗೆ ಆಹಾರವಾಗಿವೆ. ಉದಾಹರಣೆಗೆ ಈ ವಾರ ಬರ್ಮಾದಲ್ಲಿ ‘ರೊಹಿಂಗ್ಯಾ ಇಸ್ಲಾಮಿಕ್ ಭಯೋತ್ಪಾದಕರು’ ಹಿಂದುಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ತೋರಿಸುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಹಿಂದು ಪ್ರಾಬಲ್ಯದ ಭಾರತದಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ದ್ವೇಷಭಾವನೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದವು.
ಹಳೆಯ ವೀಡಿಯೊ ಮತ್ತು ಚಿತ್ರಗಳನ್ನು ತಾಜಾ ಎಂದು ಬಿಂಬಿಸಿ ದ್ವೇಷವನ್ನು ಹರಡುವ ಸಂದೇಶಗಳನ್ನು ಹರಿಯಬಿಡಲಾಗುತ್ತಿದೆ. ಈ ಚಿತ್ರಗಳನ್ನು ಮಾಧ್ಯಮಗಳು ನಿಮಗೆ ತೋರಿಸಿರುವುದಿಲ್ಲ. ನೀವು ನಿಜವಾಗಿ ಭಾರತೀಯ ದೇಶಪ್ರೇಮಿಯಾಗಿದ್ದರೆ ನನ್ನ ಈ ಸಂದೇಶವನ್ನು ಫಾರ್ವರ್ಡ್ ಮಾಡಿ ಎಂದು ಜೈನ್ ಹೇಳಿದರು.