×
Ad

ದಾರ್ಶನಿಕ ಗಾಂಧಿಯನ್ನು ಕೊಂದ ಮನೋಸ್ಥಿತಿಗಳು ಅಳಿಯದೆ ಉಳಿದಿದೆ- ವಿಲ್‌ಫ್ರೆಡ್ ಡಿಸೋಜ

Update: 2017-10-02 20:56 IST

ಪುತ್ತೂರು, ಅ. 2: ದಾರ್ಶನಿಕ ಗಾಂಧಿಯನ್ನು ಕೊಂದ ಗೋಡ್ಸೆಯಂತಹ ಮನೋಸ್ಥಿತಿಗಳು ಅಳಿಯದೆ ಉಳಿದಿದ್ದು, ಇಂದಿಗೂ ಧರ್ಮದ ಹೆಸರಿನಲಿ ಕೊಲೆಯ ಸರಪಣಿಗಳನ್ನು ನಡೆಸುತ್ತಲೇ ಬಂದಿವೆ. ಪ್ರಗತಿಪರ ಪತ್ರಕರ್ತೆ ಗೌರಿ ಲಂಕೇಶ್ ಬಲಿಯಾಗಲು ಈ ಮನೋಸ್ಥಿತಿಗಳು ಕಾರಣವಾಗಿದ್ದು, ಇಂತಹ ಗಂಡಾಂತರದ ಸ್ಥಿತಿಯಲ್ಲಿ ನಾವಿದ್ದು ಇದರಿಂದ ಪಾರಾಗಬೇಕಾದರೆ ತಾತ್ವಿಕ,ಸೈದ್ಧಾಂತಿಕ, ವೈಚಾರಿಕ ಹಾಗೂ ಮಾನವೀಯತೆಯಿಂದ ಪ್ರತಿರೋಧ ಒಡ್ಡುವ ಕೆಲಸ ನಡೆಯಬೇಕಾಗಿದೆ ಎಂದು ಮಾನವಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ವಿಲ್‌ಫ್ರೆಡ್ ಡಿಸೋಜ ಹೇಳಿದರು.

ಅವರು ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆಯ ನೂತನ ಪುತ್ತೂರು ತಾಲೂಕು ಸಮಿತಿ ಉದ್ಘಾಟನೆ ಮತ್ತು ಗಾಂಧಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಯಾವುದೇ ಜಾತಿ ಮತ ಧರ್ಮಗಳ ಪ್ರತ್ಯೇಕತಾ ದೇಶವಲ್ಲ. ಇಲ್ಲಿ ಏಕಭಾಷೆ,ಏಕ ಸಂಸ್ಕೃತಿಯನ್ನು ಸ್ಥಾಪಿಸುವುದು ಸಾಧ್ಯವಿಲ್ಲ. ಇದೊಂದು ವಿಭಿನ್ನ ಸಂಸ್ಕೃತಿಗಳ ನೆಲೆಯಾಗಿದೆ. ದೇಶಕ್ಕಾಗಿ ಹೋರಾಟ ನಡೆಸಿದ ಗಾಂಧಿ ಇಂದು ಕನ್ನಡಕ, ಶೌಚಾಲಯ ನಿರ್ಮಾಣ, ಸ್ವಚ್ಛತೆಗೆ ಸೀಮಿತವಾಗಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಗಾಂಧಿ ಸಂಪೂರ್ಣ ಮರೆಯಾಗುವ ಅಪಾಯದ ಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ಇದೊಂದು ಉದ್ದೇಶಪೂರ್ವಕ ಕೃತ್ಯವಾಗಿದ್ದು, ಹಲವು ದಾರ್ಶನಿಕರಾದ ಜ್ಯೋತಿ ಬಾಪುಲೆ, ಶಾಹು ಮಹರಾಜ್, ನಾರಾಯಣಗುರು,ಕುದ್ಮಲ್ ರಂಗರಾವ್ ಮೊದಲಾದವರ ಆದರ್ಶಗಳನ್ನು ಉಳಿಸುವ ನಾಡಿನ ನಿಜವಾದ ವೈಚಾರಿಕ ಚಳವಳಿಯಾಗಿ ಮಾನವ ಬಂಧುತ್ವ ವೇದಿಕೆ ೆಲಸ ಮಾಡಲಿದೆ ಎಂದು ಹೇಳಿದರು.

ಪ್ರೋಕಾನ್ ಅಣುಸ್ಪೋಟ, ಡಿಸೆಂಬರ್ 6 ನಮಗೆ ಮಾರಕ ದಿನಗಳನ್ನು ಮಾತ್ರ ನೆನಪಿಸುತ್ತವೆ. ಆದರೆ ಇದರ ಹಿಂದೆ ಬುದ್ಧಪೂರ್ಣಿಮೆ, ಅಂಬೇಡ್ಕರ್ ಪರಿನಿರ್ವಾಣ ದಿನ ವೆಂಬುವುದನ್ನು ಮರೆಸುವ ಕಾರಣಕ್ಕಾಗಿಯೇ ಈ ದಿನಗಳನ್ನು ಮಾರಕ ದಿನಗಳನ್ನಾಗಿ ಮಾಡುವ ಕೃತ್ಯ ನಡೆಸಲಾಗಿದೆ. ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟ ದೇಶಪ್ರೇಮಿ ಟಿಪ್ಪು ಸುಲ್ತಾನ್ ಅವರನ್ನು ದೇಶದ್ರೋಹಿಯಾಗಿ ಕೆಲವರು ಕಾಣುತ್ತಿರುವುದು ನಾಚಿಗೆಗೇಡಿನ ವಿಚಾರ ಎಂದರು.
 ಮುಖ್ಯ ಭಾಷಣ ಮಾಡಿದ ಮಾನವ ಬಂಧುತ್ವ ವೇದಿಕೆಯ ವಲಯ ಸಂಚಾಲಕ ಸತೀಶ್ ಕುಮಾರ್ ಹಾಸನ ಅವರು ಜಗತ್ತನ್ನು ಹಿಂಸಾ ಕುಲುಮೆಯಿಂದ ಪಾರು ಮಾಡಲು ‘ಗಾಂಧಿ ಮಾರ್ಗ’ವೊಂದೇ ನಮ್ಮ ಮುಂದಿರುವ ದಾರಿಯಾಗಿದೆ. ಕ್ರೌರ್ಯ ಮನಸ್ಥಿತಿ ಯನ್ನು ಬದಲಾಯಿಸಲು ಗಾಂಧೀಜಿಯವರ ತತ್ವ ಆದರ್ಶಗಳು ಅನಿವಾರ್ಯವಾಗಿದೆ. ದೇಶಕ್ಕಾಗಿ ನಿರಂತರ ಹೋರಾಟ ನಡೆಸಿದ ದಾರ್ಶನಿಕರನ್ನು ಅರ್ಥ ಮಾಡಿಕೊಳ್ಳಲು ಅಂತಕರಣ ಬೇಕು.

ನಾರಾಯಣಗುರು ಹೇಳಿದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬುವುದನ್ನು ನಾವು ಸಮಾಜಕ್ಕೆ ಸೈದ್ಧಾಂತಿಕ ಚಳವಳಿಯ ಮೂಲ ಅರ್ಥ ಮಾಡಿಸಬೇಕಾಗಿದೆ ಎಂದರು.

ಕುಂಬ್ರ ಕೆಐಸಿ ಮೆನೇಜರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಕೋಮುವಾದದ ವಿರುದ್ಧ ನಡೆಸುವ ಹೋರಾಟವೇ ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳುವ ದಾರಿಯಾಗಿದೆ. ಹಿಂದು,ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗಳನ್ನು ಒಗ್ಗೂಡಿಸಿ ಮಾನವಧರ್ಮ ಪಾಲನೆ ಮಾಡಿದ ಏಕೈಕ ವ್ಯಕ್ತಿ ಗಾಂಧೀಜಿ. ಇವರ ತತ್ವ ಕೇವಲ ಬಾಯಿ ಮಾತಿಗಲ್ಲದೆ ನಿಜವಾದ ಜೀವನ ಸಂದೇಶವಾಗಿ ಬದಲಾಗಬೇಕಾಗಿದೆ ಎಂದರು.

ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಝೇವಿಯರ್ ಡಿಸೋಜ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಅಂಬೇಡ್ಕರ್ ತತ್ವ ಹಿತರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷ ಚಂದ್ರ ಐ ಕುಂಬ್ರ ಉಪಸ್ಥಿರಿದ್ದರು.

ಮಾನವ ಬಂಧುತ್ವ ವೇದಿಕೆಯ ಪುತ್ತೂರು ತಾಲೂಕು ಮುಖ್ಯ ಸಂಚಾಲಕ ಅಮಲ ರಾಮಚಂದ್ರ ಸ್ವಾಗತಿಸಿದರು. ಸಂಚಾಲಕ ಕೃಷ್ಣ ಪ್ರಸಾದ್ ಆಳ್ವ ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News