ಮಾತೃಪೂರ್ಣ ಯೋಜನೆ ಅನುಷ್ಠಾನ ಅಸಾಧ್ಯವಲ್ಲ- ಶಕುಂತಳಾ ಶೆಟ್ಟಿ

Update: 2017-10-02 17:33 GMT

ಪುತ್ತೂರು, ಅ. 2: ಗರ್ಭಿಣಿ, ಬಾಣಂತಿಯರು ಮತ್ತು ಮಕ್ಕಳಲ್ಲಿ ಉಂಟಾಗುತ್ತಿರುವ ಅಪೌಷ್ಠಿಕತೆಯನ್ನು ತಡೆಯಲು ಸರ್ಕಾರವು ಮಾತೃಪೂರ್ಣ ಯೋಜನೆ ಯನ್ನು ಜಾರಿಗೊಳಿಸಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಅಸಾಧ್ಯವಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಪುತ್ತೂರು ನಗರದ ಬನ್ನೂರು ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಮಟ್ಟದ ಮಾತೃಪೂರ್ಣ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಮನೆಗಳು ದೂರ ದೂರ ಇರುವುದರಿಂದ ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರು ಹೊತ್ತಲ್ಲದ ಹೊತ್ತಿನಲ್ಲಿ ಮನೆಯಿಂದ ಹೊರಗೆ ಹೋಗಬಾರದು ಎಂಬ ನಂಬಿಕೆಗಳಿರುವುದರಿಂದ ಈ ಯೋಜನೆಯ ಅನುಷ್ಠಾನ ಕಷ್ಟವಾಗಲಿದೆ ಎಂಬ ಅಭಿಪ್ರಾಯ ಅಂಗನವಾಡಿ ಕಾರ್ಯಕರ್ತೆಯರಿಂದ ಕೇಳಿ ಬರುತ್ತಿದೆ. ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಟಿಯಲ್ಲಿ ಇಂತಹ ನಂಬಿಕೆಗಳು ಬೆಳೆದು ಬಂದಿದೆ. ಇದರಿಂದಾಗಿ ಯೋಜನೆಯ ಅನುಷ್ಠಾನ ಕಷ್ಟಕರವಾಗಿದೆ ಅದರೆ ಅಸಾಧ್ಯವಲ್ಲ ಫಲಾನುಭವಿಗಳ ಮನವೊಲಿಸುವ ಕೆಲಸ ನಡೆದಲ್ಲಿ ಯೋಜನೆಯ ಯಶಸ್ವಿಯಾಗಲಿದೆ ಎಂದರು.

ಅಪೌಷ್ಠಿಕತೆಯಿಂದ ಬಳಲುತ್ತಿರುವ ಎಲ್ಲಾ ಮಕ್ಕಳೂ ಸದೃಡರಾಗಿ, ಬುದ್ದಿವಂತರಾಗಿ ಬೆಳೆಯಬೇಕು ಎಂದು ಸರ್ಕಾರದ ಇಚ್ಚೆಯಾಗಿದೆ. ಜಿಲ್ಲೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನಾನೀಗಲೇ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಮುಂದೆ ಇಲ್ಲಿ ಯೋಜನೆಯಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳಿವೆ ಎಂದ ಅವರು ಎಲ್ಲರಿಗೂ ಪೌಷ್ಠಿಕ ಆಹಾರ ಸಿಗುವಲ್ಲಿ ಕಾರ್ಯಕರ್ತರು ಸಹಕಾರ ನೀಡಬೇಕು ಎಂದು ಹೇಳಿದರು.

ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ ಯಾವುದೇ ಯೋಜನೆಗಳು ಬಂದಾಗ ಅದರ ಬಗ್ಗೆ ಅಪಸ್ವರಗಳು ಬರುವುದು ಸಹಜ. ಅನುಷ್ಠಾನದಲ್ಲಿ ಮೊದಲಿಗೆ ಕಷ್ಟವೆನಿಸಿದರೂ ಮತ್ತೆ ಸರಿಯಾಗಬಹುದು. ಮಾತೃಪೂರ್ಣ ಯೋಜನೆಯು ಬಹಳ ಉಪಯುಕ್ತವಾಗಿದ್ದು, ಮಹಿಳೆಯರು ಅಂಗನವಾಡಿಗೆ ಬಂದು ಅಹಾರ ಸೇವಿಸಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ ಹೆಗಡೆ ಮಾತನಾಡಿ ತಾಲೂಕಿನಲ್ಲಿ 4ಸಾವಿರ ಗರ್ಭಿಣಿ ಮತ್ತು ಬಾಣಂತಿ ಫಲಾನುಭವಿಗಳಿದ್ದು, ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಾಗ್ರಿ ವಿತರಿಸಲಾಗಿದೆ. ಆಹಾರ ಬೇಯಿಸಲು ಈಗಾಗಲೇ 4 ಹೆಚ್ಚುವರಿ ಸಿಲಿಂಡರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಪಾತ್ರೆ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು. ನಗರಸಭಾ ಸದಸ್ಯರಾದ ಜಯಲಕ್ಷ್ಮೀ, ರಾಮಣ್ಣ ಗೌಡ ಅಲಂಗ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಜೀರ್ ಅಹ್ಮದ್, ಅಂಗನವಾಡಿ ಮೇಲ್ವಿಚಾರಕಿ ಜಲಜಾಕ್ಷಿ, ಕಾರ್ಯಕರ್ತೆ ರೋಹಿಣಿ ಮತ್ತಿತರರು ಉಪಸ್ಥಿತರಿದ್ದರು. ಸ್ಪೂರ್ತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ದಿನೇಶ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News