ದ.ಕ.ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಪ್ರತಿಭಟನೆ
ಮಂಗಳೂರು, ಅ.3: ದ.ಕ. ಜಿಲ್ಲಾ ಗಿಲ್‌ನೆಟ್ ಮೀನುಗಾರ ಸಂಘ ಹಾಗೂ ನಾಡದೋಣಿ ಮೀನುಗಾರರ ಸಂಘದ ಸದಸ್ಯರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಬಂದರ್ ದಕ್ಕೆಯಲ್ಲಿರುವ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಅಲಿ ಹಸನ್ ಮೀನುಗಾರಿಕೆ ಆರಂಭವಾಗಿ 1 ತಿಂಗಳಾದರೂ ಗಿಲ್‌ನೆಟ್ ಹಾಗೂ ನಾಡದೋಣಿಗೆ ಈವರೆಗೆ ಸಬ್ಸಿಡಿಯ ಸೀಮೆಎಣ್ಣೆ ಪರವಾನಿಗೆಯನ್ನು ಮೀನುಗಾರಿಕೆ ಇಲಾಖೆಯು ನವೀಕರಿಸಲಿಲ್ಲ. ಹಾಗಾಗಿ ಮೀನುಗಾರಿಕೆಗೆ ಬೇಕಾದ ಸೀಮೆಎಣ್ಣೆ ಯನ್ನು ಸಕಾಲದಲ್ಲಿ ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಸಚಿವರಾದ ಪ್ರಮೋದ್ ಮಧ್ವರಾಜ್ ಹಾಗು ಯು.ಟಿ.ಖಾದರ್‌ರ ಮನೆಯ ಮುಂದೆ ಧರಣಿ ನಡೆಸಲಾಗುವುದು ಎಂದರು.
ಸಾರ್ವಜನಿಕ ವ್ಯವಸ್ಥೆಯಡಿ ಕೇಂದ್ರ ಸರಕಾರದಿಂದ ಬಿಡುಗಡೆಯಾಗುವ ಸಬ್ಸಿಡಿ ಸಹಿತ ಸೀಮೆಎಣ್ಣೆಯನ್ನು ರಾಜ್ಯ ಪಡಿತರ ಚೀಟಿದಾರರಿಗೆ ವಿತರಿಸುವುದರೊಂದಿಗೆ ಕರಾವಳಿಯ ಮೀನುಗಾರರ ಹಿತದೃಷ್ಟಿಯಿಂದ ರಾಜ್ಯ ಸರಕಾರದ ಘೋಷಣೆಯಂತೆ ಯಾಂತ್ರಿಕ ನಾಡದೋಣಿಗಳಿಗೆ ಹಲವು ವರ್ಷಗಳಿಂದ ಸೀಮೆಎಣ್ಣೆಯನ್ನು ಆಹಾರ ಇಲಾಖೆಯ ಮೂಲಕ ಪೂರೈಸಲಾಗುತ್ತಿತ್ತು. ಆದರೆ ಎಪ್ರಿಲ್ 26ರಿಂದ ಕೇಂದ್ರ ಸರಕಾರವು ಸಬ್ಸಿಡಿ ಸೀಮೆ ಎಣ್ಣೆಯನ್ನು ಅಡುಗೆ ಮತ್ತು ಬೆಳಕಿನ ಉದ್ದೇಶಕ್ಕಾಗಿ ಮಾತ್ರ ಬಳಸಲು ಕಡ್ಡಾಯಗೊಳಿಸಲಾಗಿದೆ. ಇತರ ಯಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಜಿಲ್ಲೆಯಲ್ಲಿ 1300ಕ್ಕೂ ಅಧಿಕ ಮೀನುಗಾರಿಕಾ ದೋಣಿಗಳು ಪರ್ಮಿಟ್ ಹೊಂದಿದೆ. ಸುಮಾರು 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮೀನುಗಾರರು ದೋಣಿಗಳಲ್ಲಿ ದುಡಿಯುತ್ತಿದ್ದಾರೆ. ಮೀನುಗಾರಿಕೆ ಆರಂಭಗೊಂಡು ತಿಂಗಳಾದರೂ ಸಬ್ಸಿಡಿ ಸೀಮೆಎಣ್ಣೆ ಪೂರೈಕೆಯಾಗದ ಕಾರಣ ಈ ಮೀನುಗಾರರು ಸಮಸ್ಯೆಗೆ ಸಿಲುಕಿದ್ದಾರೆ ಎಂದು ಆಲಿ ಹಸನ್ ಹೇಳಿದರು.
ಪ್ರತಿಭಟನೆಯ ಬಳಿಕ ಸೀಮೆಎಣ್ಣೆ ಮತ್ತು ಪರವಾನಿಗೆಯನ್ನು ಒದಗಿಸಲು ಇಲಾಖೆಯು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿ ಮೀನುಗಾರಿಕಾ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಗಿಲ್‌ನೆಟ್ ಸಂಘದ ಗೌರವಾಧ್ಯಕ್ಷ ಸತೀಶ್ ಕೋಟ್ಯಾನ್, ನಾಡದೋಣಿ ಸಂಘದ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಗಿಲ್‌ನೆಟ್ ಸಂಘದ ಉಪಾಧ್ಯಕ್ಷ ಮುಹಮ್ಮದ್ ರಫಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಬಶೀರ್ ಬೆಂಗ್ರೆ, ಕಾರ್ಯದರ್ಶಿ ಸುಭಾಷ್ ಕೋಟ್ಯಾನ್ ಉಪಸ್ಥಿತರಿದ್ದರು.