×
Ad

ರಾಜ್ಯ ಸರಕಾರ ವಸತಿಭಾಗ್ಯ ಯೋಜನೆಗೆ ಮುಂದಾಗಲಿ: ಜೆ. ಬಾಲಕೃಷ್ಣ ಶೆಟ್ಟಿ

Update: 2017-10-03 21:35 IST

ಮಂಗಳೂರು, ಅ. 3: ಹಲವಾರು ಯೋಜನೆಗಳನ್ನು ರೂಪಿಸಿದ ಸಿದ್ದರಾಮಯ್ಯ ಸರಕಾರವು ಸೂರು ಇಲ್ಲದ ಬಡಜನತೆಗೆ ಮನೆನಿವೇಶನ, ವಸತಿ ವ್ಯವಸ್ಥೆ ಕಲ್ಪಿಸುವ ಮೂಲಕ ವಸತಿಭಾಗ್ಯ ಯೋಜನೆಗೆ ಯಾಕೆ ಮುಂದಾಗುತ್ತಿಲ್ಲ ಎಂದು ಸಿಪಿಎಂ ರಾಜ್ಯ ಮುಖಂಡ ಜೆ. ಬಾಲಕೃಷ್ಣ ಶೆಟ್ಟಿ ಪ್ರಶ್ನಿಸಿದ್ದಾರೆ.

ಪಡೀಲ್‌ನಲ್ಲಿ ಜರಗಿದ ನಿವೇಶನರಹಿತರ ಹಕ್ಕೊತ್ತಾಯ ಚಳವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮಂಗಳೂರಿನಲ್ಲಿ ಮನೆನಿವೇಶನ ಒದಗಿಸುವಲ್ಲಿ ಸ್ಥಳೀಯ ಶಾಸಕ ಜೆ. ಆರ್. ಲೋಬೋ ಹಾಗೂ ಕಾಂಗ್ರೆಸ್ ನೇತೃತ್ವದ ಮನಪಾ ಆಡಳಿತ ಕಿಂಚಿತ್ತೂ ಗಮನ ಹರಿಸಿಲ್ಲ ಎಂದು ಆರೋಪಿಸಿದರು.

ನಿವೇಶನರತರ ಹೋರಾಟ ಸಮಿತಿ ಮುಖಂಡ ಪ್ರೇಮನಾಥ ಜಲ್ಲಿಗುಡ್ಡೆ ಮಾತನಾಡಿ, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನಿವೇಶನರತರ ಹೋರಾಟ ಸಮಿತಿಯ ನಿರಂತರ ಹೋರಾಟದ ಫಲವಾಗಿ ನಿವೇಶನರಹಿತರ ಪಟ್ಟಿ, ಸ್ಥಳ ನಿಗದಿ, ಆಯ್ಕೆ ಪಟ್ಟಿ, ಟೆಂಡರ್ ಪ್ರಕ್ರಿಯೆ ನಡೆಯಲು ಸಾಧ್ಯವಾಗಿದೆ ಎಂದರು.

ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್, ಮಾಜಿ ಕಾರ್ಪೊರೇಟರ್ ಜಯಂತಿ ಬಿ. ಶೆಟ್ಟಿ, ಸಿಪಿಎಂ ನಾಯಕ  ಸುರೇಶ್ ಬಜಾಲ್, ಸಂತೋಷ್ ಶಕ್ತಿನಗರ, ದಿನೇಶ್ ಶೆಟ್ಟಿ ಮಾತನಾಡಿ ನಿವೇಶನರಹಿತರ ಬಗ್ಗೆ ಮನಪಾದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದರು.

ವೇದಿಕೆಯಲ್ಲಿ ಹೋರಾಟ ಸಮಿತಿಯ ಮುಖಂಡರಾದ ರೋಹಿಣಿ ಜಲ್ಲಿಗುಡ್ಡೆ, ಪೂರ್ಣಿಮಾ ಅತ್ತಾವರ, ಗೀತಾ ಜಲ್ಲಿಗುಡ್ಡೆ, ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News