ಶಿವಾಜಿ ಸ್ಮಾರಕದ ಬದಲು ಮುಂಬೈ ರೈಲ್ವೆ ಅವ್ಯವಸ್ಥೆ ಸರಿಪಡಿಸಿ
ಮುಂಬೈ, ಅ.3; ಅರಬ್ಬಿ ಸಮುದ್ರದಲ್ಲಿ ಶಿವಾಜಿ ಸ್ಮಾರಕ ನಿರ್ಮಿಸಲು ಖರ್ಚು ಮಾಡಲು 600 ಕೋಟಿ ರೂ.ಗಳನ್ನು ಮುಂಬೈನ ಸ್ಥಳೀಯ ರೈಲು ಸೇವೆಗಳ ಸುಧಾರಣೆಗೆ ಬಳಸಿಕೊಳ್ಳಬೇಕೆಂದು ಆಗ್ರಹಿಸುವ ಆನ್‌ಲೈನ್ ಅಭಿಯಾನಕ್ಕೆ ಕೇವಲ ಮೂರು ದಿನಗಳಲ್ಲಿ 25 ಸಾವಿರ ಮಂದಿಯ ಬೆಂಬಲ ದೊರೆತಿದೆ.
ಕಳೆದ ವಾರ ಎಲ್ಫಿನ್‌ಸ್ಟನ್ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 23 ಮಂದಿ ಸಾವನ್ನಪ್ಪಿದ ಘಟನೆಯ ಬಳಿಕ ಈ ಅನ್‌ಲೈನ್ ಅರ್ಜಿ ಅಭಿಯಾನವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಪಿನ್ ವಿಜಯನ್ ಎಂಬವರು ಈ ಆನ್‌ಲೈನ್ ಅರ್ಜಿಯನ್ನು, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತಿತರರಿಗೆ ಸಲ್ಲಿಸಿದ್ದಾರೆ.
ಮುಂಬೈನ ರೈಲ್ವೆ ಅವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಜನರು ಧ್ವನಿಯೆತ್ತಿದಾಗ, ಸರಕಾರವು ಯಾವಾಗಲೂ ಹಣಕಾಸಿನ ಕೊರತೆಯ ಬಗ್ಗೆ ಬೆಟ್ಟು ಮಾಡಿ ತೋರಿಸುತ್ತಿದೆ. ಅರಬ್ಬಿ ಸಮುದ್ರದಲ್ಲಿ ಸ್ಮಾರಕ ನಿರ್ಮಿಸಲು 3,600 ಕೋಟಿ ರೂ. ಅನುದಾನ ನೀಡುವುದನ್ನು ನಾವು ಕಾಣುತ್ತಿದ್ದೇವೆ. ಇದು ದೊಡ್ಡ ಮೊತ್ತದ ಹಣವನ್ನು ಚರಂಡಿಗೆ ಎಸೆಯುವುದಕ್ಕೆ ಸರಿಸಮವಾಗಿದೆ’’ ಎಂದು ಅರ್ಜಿ ಹೇಳಿದೆ.
ಮುಂಬೈ ಉಪನಗರ ರೈಲ್ವೆ ಜಾಲವನ್ನು ಮೇಲ್ದರ್ಜೆಗೇರಿಸುವ ಮೂಲಕ ಆ ಹಣದ ಸದ್ಬಳಕೆ ಮಾಡಬಹುದು ಹಾಗೂ ಇದರಿಂದ ಹಲವಾರು ಜನರ ಜೀವಗಳನ್ನು ಉಳಿಸಬಹುದಾಗಿದೆ. ಒಂದು ವೇಳೆ ಶಿವಾಜಿ ಮಹಾರಾಜರು ಜೀವಂತವಿದ್ದಲ್ಲಿ ಅವರು ಕೂಡಾ ಜನರು ಪ್ರಾಣಗಳನ್ನು ಕಳೆದುಕೊಳ್ಳುತ್ತಿರುವಾಗ ಇಂತಹ ಸ್ಮಾರಕದ ನಿರ್ಮಾಣವನ್ನು ಬಯಸುತ್ತಿರಲಿಲ್ಲವೆಂದು ಅರ್ಜಿಯು ಹೇಳಿದೆ.
ಸೆಪ್ಟಂಬರ್ 29ರಂದು ಎಲ್ಫಿನ್‌ಸ್ಟನ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ದುರಂತದ ಬಳಿಕ ಕೇಂದ್ರದ ಬುಲೆಟ್ ರೈಲು ಯೋಜನೆಯನ್ನು ವಿರೋಧಿಸಿ ಅನ್‌ಲೈನ್ ಅರ್ಜಿಗಳು ಸಲ್ಲಿಕೆಯಾಗಿದ್ದವು. ಬುಲೆಟ್ ರೈಲು ಯೋಜನೆಯ ಬದಲು ಮುಂಬೈನ ರೈಲು ಜಾಲವನ್ನು ಮೇಲ್ದರ್ಜೆಗೇರಿಸುವುದಕ್ಕೆ ಆದ್ಯತೆ ನೀಡಬೇಕೆಂದು ಆಗ್ರಹಿಸಲಾಗಿತ್ತು.
ನಮಗೆ ಬುಲೆಟ್ ರೈಲಿನ ಅಗತ್ಯವಿಲ್ಲ, ಅದರ ಬದಲು ಉತ್ತಮ ರೈಲ್ವೆ ವ್ಯವಸ್ಥೆ ಬೇಕಾಗಿದೆ ಎಂದು 12ನೆ ತರಗತಿ ವಿದ್ಯಾರ್ಥಿ ಶ್ರೇಯಾಚವಾಣ್ ಪ್ರಧಾನಿಗೆ ಬರೆದ ಪತ್ರವನ್ನು ಬೆಂಬಲಿಸಿ 12 ಸಾವಿರ ಮಂದಿ ಸಹಿಹಾಕಿದ್ದಾರೆ.