×
Ad

"ನೋಟು ರದ್ದತಿ ಎಲ್ಲ ಕಪ್ಪು ಹಣವನ್ನು ಸಕ್ರಮಗೊಳಿಸಿದ ಅತಿದೊಡ್ಡ ಸರ್ಕಾರೀ ಯೋಜನೆ "

Update: 2017-10-03 22:27 IST

ಹೊಸದಿಲ್ಲಿ, ಅ.3: ನೋಟು ರದ್ದತಿ ಪ್ರಕ್ರಿಯೆಯು ಕೇಂದ್ರ ಸರಕಾರವೇ ರೂಪಿಸಿ ಅನುಷ್ಠಾನಗೊಳಿಸಿದ 'ಎಲ್ಲ ಕಪ್ಪು ಹಣವನ್ನು ಸಕ್ರಮಗೊಳಿಸಿದ ಅತಿದೊಡ್ಡ ಸರ್ಕಾರೀ ಯೋಜನೆಯಾಗಿದೆ' ಎಂದು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ಟೀಕಿಸಿದ್ದಾರೆ.

ಕಪ್ಪುಹಣ ಹೊಂದಿರುವ ಪ್ರತಿಯೊಬ್ಬರಿಗೂ ಹಣವನ್ನು ಸಕ್ರಮಗೊಳಿಸಲು ದಾರಿ ಮಾಡಿಕೊಟ್ಟ ಈ ಪ್ರಕ್ರಿಯೆ ಒಂದು ‘ಮೂರ್ಖ ನಡೆ’ಯಾಗಿತ್ತು ಎಂದು ಶೌರಿ ಹೇಳಿದ್ದಾರೆ. ರದ್ದಾದ ಹಣದ ಪೈಕಿ ಶೇ.99ರಷ್ಟು ಹಣ ವಾಪಸ್ ಬಂದಿದೆ ಎಂದು ಆರ್‌ಬಿಐ ತಿಳಿಸಿದೆ. ಇದರರ್ಥ ಈ ‘ದೈತ್ಯ’ ನಡೆಯಿಂದ ಕಪ್ಪು ಹಣ ಅಥವಾ ತೆರಿಗೆ ತಪ್ಪಿಸಿದ ಹಣವನ್ನು ಪತ್ತೆಹಚ್ಚಲಾಗಿಲ್ಲ ಎಂದು ಶೌರಿ ಹೇಳಿದರು.

ಸರಕಾರದ ತಪ್ಪುಹೆಜ್ಜೆಗಳ ಸಾಲಲ್ಲಿ ಜಿಎಸ್‌ಟಿ ಪ್ರಮುಖವಾದುದು ಎಂದಿರುವ ಶೌರಿ, ಇದೊಂದು ಪ್ರಮುಖ ಸುಧಾರಣಾ ಕ್ರಮವಾಗಿದ್ದರೂ ಇದನ್ನು ಅನುಷ್ಠಾನಗೊಳಿಸಿರುವ ರೀತಿ ಸರಿಯಾಗಿಲ್ಲ ಎಂದರು. ಈ ನಿಯಮಕ್ಕೆ ಮೂರು ತಿಂಗಳಲ್ಲಿ 7 ಬಾರಿ ತಿದ್ದುಪಡಿ ಮಾಡಲಾಗಿದೆ ಎಂದ ಶೌರಿ, ಜಿಎಸ್‌ಟಿ ಜಾರಿಗೊಳಿಸಿದ ಸಂದರ್ಭವನ್ನೂ ಟೀಕಿಸಿದರು. ಭಾರತದ ಸ್ವಾತಂತ್ರ ಘೋಷಣೆಯ ಸಂದರ್ಭಕ್ಕೆ ಜಿಎಸ್‌ಟಿ ಅನುಷ್ಠಾನದ ಸಂದರ್ಭವನ್ನು ಹೋಲಿಕೆ ಮಾಡಿರುವುದನ್ನು ಅವರು ಲೇವಡಿ ಮಾಡಿದರು.

 ಕೇಂದ್ರ ಸರಕಾರದ ಪ್ರಮುಖ ಆರ್ಥಿಕ ಕಾರ್ಯನೀತಿಗಳನ್ನು ‘ 2.5 ಮಂದಿ ಒಳಗೊಂಡಿರುವ ಸೀಲ್ ಮಾಡಲಾಗಿರುವ ಪ್ರತಿಧ್ವನಿ ಚೇಂಬರ್‌ನಲ್ಲಿ ’ ಕೈಗೊಳ್ಳಲಾಗುತ್ತಿದೆ. 2.5 ಮಂದಿ ಎಂದರೆ ಅಮಿತ್ ಶಾ, ಪ್ರಧಾನಿ ಮೋದಿ ಹಾಗೂ ಓರ್ವ ಸರಕಾರಿ ವಕೀಲ ಎಂದು ಶೌರಿ ವಿವರಿಸಿದರು. 

 ಮಾಜಿ ಕೇಂದ್ರ ಸಚಿವ, ಹಿರಿಯ ಬಿಜೆಪಿ ಮುಖಂಡ ಯಶವಂತ ಸಿನ್ಹ ಕೇಂದ್ರ ಸರಕಾರದ ಕಾರ್ಯವೈಖರಿಯ ಬಗ್ಗೆ ತೀವ್ರ ಟೀಕಾಪ್ರಹಾರ ಮಾಡಿರುವುದನ್ನು ಪ್ರಸ್ತಾವಿಸಿದ ಶೌರಿ, ಸಿನ್ಹ ಹೇಳಿಕೆಗೆ ನನ್ನ ಬೆಂಬಲವಿದೆ. ಸರಕಾರದ ಕಾರ್ಯವೈಖರಿಯ ಬಗ್ಗೆ ಬಿಜೆಪಿಯಲ್ಲಿ ಪ್ರತಿಯೊಬ್ಬರಿಗೂ ಕಳವಳವಿದೆ. ಆದರೆ ಯಾರಿಗೂ ಉಸಿರೆತ್ತಲು ಧೈರ್ಯವಿಲ್ಲ ಎಂಬ ಸಿನ್ಹ ಹೇಳಿಕೆ ಸರಿಯಾಗಿದೆ ಎಂದು ಶೌರಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News