×
Ad

60ರ ಕೆಳಹರೆಯದವರನ್ನೂ ಹಿರಿಯ ನಾಗರಿಕರೆಂದು ಪರಿಗಣಿಸಲು ನ್ಯಾಯಾಲಯಕ್ಕೆ ಅರ್ಜಿ

Update: 2017-10-03 22:39 IST

ಹೊಸದಿಲ್ಲಿ, ಅ.3: ಇನ್ನೂ ಹಿರಿಯ ನಾಗರಿಕರೆಂದು ಕರೆಸಿಕೊಳ್ಳುವ ಹಂತಕ್ಕೆ ತಲುಪದ ಪೋಷಕರು ತಮ್ಮ ಮಕ್ಕಳಿಂದ ಅನುಭವಿಸುವ ದೈಹಿಕ ಹಾಗೂ ಮಾನಸಿಕ ಹಿಂಸೆಯಿಂದ ರಕ್ಷಣೆ ನೀಡುವ ಸೂಕ್ತ ಕಾನೂನಿನ ಅಗತ್ಯವಿದೆ ಎಂದು 57ರ ಹರೆಯದ ವ್ಯಕ್ತಿಯೋರ್ವರು ದಿಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದಾರೆ.

60ರ ಹರೆಯ ತಲುಪಿದ ವ್ಯಕ್ತಿಗಳನ್ನು ಹಿರಿಯ ನಾಗರಿಕರು ಎಂದು ವರ್ಗೀಕರಿಸಲಾಗಿದೆ. ಕೌಟುಂಬಿಕ ಹಿಂಸೆಯಿಂದ ಹಿರಿಯ ನಾಗರಿಕರನ್ನು ರಕ್ಷಿಸಲು ಕಾನೂನಿದೆ. ಆದರೆ ಇನ್ನೂ 60ರ ಹರೆಯ ತಲುಪದ, ಆದರೆ ತಮ್ಮ ಮಕ್ಕಳಿಂದ ಹಿಂಸೆ ಅನುಭವಿಸುತ್ತಿರುವ ವ್ಯಕ್ತಿಗಳು ಅತಂತ್ರರಾಗಿದ್ದಾರೆ ಎಂದು ಘನಶ್ಯಾಮ್ ಸಿಂಗ್ ರಾವತ್ ಎಂಬ ವ್ಯಕ್ತಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ. ತನ್ನ ಮನೆಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ತನಗೆ ನೀಡುವಂತೆ ಒತ್ತಾಯಿಸುತ್ತಿರುವ ತನ್ನ ಕಿರಿಯ ಮಗ, ಸಹಚರರೊಂದಿಗೆ ಕೂಡಿಕೊಂಡು ತನ್ನನ್ನು ಹಿಂಸಿಸುತ್ತಿದ್ದಾನೆ ಹಾಗೂ ಕೊಲ್ಲಲು ಪ್ರಯತ್ನಿಸಿದ್ದಾನೆ . ಅಲ್ಲದೆ ಮಗನಿಂದ ತೀವ್ರ ಹಲ್ಲೆಗೊಳಗಾದ ತಾನು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭ ಮಗ ಮನೆಯನ್ನು ವಶಕ್ಕೆ ಪಡೆದಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ ಎಂದು ರಾವತ್ ಅರ್ಜಿಯಲ್ಲಿ ದೂರಿದ್ದಾರೆ.

ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ, ಅರ್ಜಿದಾರ ಮನೆಗೆ ಭೇಟಿ ನೀಡಲು ಬಯಸುವಾಗ ಅವರಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚಿಸಿತು ಹಾಗೂ ಅರ್ಜಿದಾರರು ಕೋರಿದಂತೆ 60ರ ಕೆಳಹರೆಯದ ವ್ಯಕ್ತಿಗಳಿಗೂ ಹಿರಿಯ ನಾಗರಿಕರ ಸ್ಥಾನಮಾನ ನೀಡಬಹುದೇ ಎಂಬ ಬಗ್ಗೆ ತನ್ನ ನಿಲುವನ್ನು ತಿಳಿಸುವಂತೆ ದಿಲ್ಲಿಯ ಆಪ್ ಸರಕಾರಕ್ಕೆ ಸೂಚಿಸಿತು. ಅಲ್ಲದೆ ವಿಚಾರಣೆಯನ್ನು ನವೆಂಬರ್ 27ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News