×
Ad

ಅಮೆರಿಕದ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ

Update: 2017-10-03 23:30 IST

ಸ್ಟಾಕ್‌ಹೋಮ್, ಅ.2: ಶತಮಾನದ ಹಿಂದೆ ಪ್ರಪ್ರಥಮ ಬಾರಿಗೆ ಆಲ್ಬರ್ಟ್ ಐನ್‌ಸ್ಟೈನ್ ಊಹಿಸಿದ್ದ ಸಮಯ ಮತ್ತು ಅಂತರದ ಆಧಾರದಲ್ಲಿ ರಚಿತವಾಗಿರುವ ಸಣ್ಣ ತರಂಗಾತರವಾದ ಗುರುತ್ವಾಕರ್ಷಕ ತರಂಗಗಳನ್ನು ಅನ್ವೇಷಿಸಿದ ಅಮೆರಿಕದ ಮೂವರು ಭೌತವಿಜ್ಞಾನಿಗಳಿಗೆ ಭೌತಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರ ಘೋಷಿಸಲಾಗಿದೆ.

 ರೈನರ್ ವೀಸ್, ಕಿಪ್ ಥ್ರೋನ್ ಮತ್ತು ಬೆರ್ರಿ ಬ್ಯಾರಿಷ್‌ರನ್ನು ಭೌತಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯ ಮೊತ್ತವಾದ 8,25,000 ಪೌಂಡ್ ಹಣದಲ್ಲಿ ವೀಸ್‌ಗೆ ಅರ್ಧಾಂಶದಷ್ಟು ಹಣ ಹಾಗೂ ಉಳಿದ ಅರ್ಧಾಂಶ ಹಣವನ್ನು ಉಳಿದಿಬ್ಬರಿಗೆ ಹಂಚಲಾಗುವುದು ಎಂದು ‘ರೋಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈಂಟಿಸ್ಟ್ ’ ಹೇಳಿಕೆಯಲ್ಲಿ ತಿಳಿಸಿದೆ.

‘ಲಿಗೊ’ ಎಂದೇ ಹೆಸರಾಗಿರುವ ‘ಲೇಸರ್ ಇಂಟರ್‌ಫೆರೊಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ವೇಟರಿ’ - ಗುರುತ್ವಾಕರ್ಷಕ ತರಂಗಗಳ ದರ್ಶನ ಸಾಧನ-ವನ್ನು ಅನ್ವೇಷಿಸುವಲ್ಲಿ ಈ ಮೂವರು ವಿಜ್ಞಾನಿಗಳೂ ಪ್ರಮುಖ ಪಾತ್ರ ವಹಿಸಿದ್ದರು. 2015ರ ಸೆಪ್ಟೆಂಬರ್‌ನಲ್ಲಿ ಗುರುತ್ವಾಕರ್ಷಕ ತರಂಗಗಳ ಐತಿಹಾಸಿಕ ದರ್ಶನ ಸಾಕಾರವಾಗಿತ್ತು.

    ಮೆಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗೌರವ ಪ್ರೊಫೆಸರ್ ಆಗಿರುವ ವೀಸ್, ‘ಲಿಗೊ’ದ ಪರಿಕಲ್ಪನೆ, ವಿನ್ಯಾಸ, ಇದಕ್ಕೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲ, ರಚನೆ ಮುಂತಾದ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿರುವ ಕಿಪ್ ಥ್ರೋನ್ ಗುರುತ್ವಾಕರ್ಷಕ ತರಂಗಗಳ ಸ್ವರೂಪದ ಬಗ್ಗೆ ಮಹತ್ವದ ಸಂಶೋಧನೆ ನಡೆಸಿದ್ದರು. ಕ್ಯಾಲಿಫೋರ್ನಿಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಗೌರವ ಭೌತವಿಜ್ಞಾನಿ ಆಗಿರುವ ಬೆರ್ರಿ ಬ್ಯಾರಿಷ್ ಈ ಮಹತ್ತರ ಸಂಶೋಧನಾ ಕಾರ್ಯ ಸಾಂಗವಾಗಿ ಮುಂದುವರಿಯಲು ಪ್ರಧಾನ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News