ಲಾಸ್ ವೆಗಾಸ್ ಹಂತಕನ ಪ್ರೇಯಸಿ ಫಿಲಿಪ್ಪೀನ್ಸ್‌ನಿಂದ ಅಮೆರಿಕಕ್ಕೆ ವಾಪಸ್
ಲಾಸ್ ವೇಗಸ್ (ಅಮೆರಿಕ), ಅ. 4: ಲಾಸ್ ವೆಗಾಸ್‌ನಲ್ಲಿ ಹತ್ಯಾಕಾಂಡ ನಡೆಸಿದ ಸ್ಟೀಫನ್ ಪ್ಯಾಡಕ್‌ನ ಪ್ರಿಯತಮೆ ಫಿಲಿಪ್ಪೀನ್ಸ್‌ನಿಂದ ಮಂಗಳವಾರ ಸಂಜೆ ಅಮೆರಿಕಕ್ಕೆ ಮರಳಿದ್ದಾರೆ. ಹತ್ಯಾಕಾಂಡದ ಬಗ್ಗೆ ಅವರಿಗೆ ಗೊತ್ತಿರುವ ಮಾಹಿತಿ ಪಡೆಯಲು ಎಫ್‌ಬಿಐ ಅಧಿಕಾರಿಗಳು ತಕ್ಷಣ ಅವರನ್ನು ಭೇಟಿಯಾಗಿದ್ದಾರೆ.
ರವಿವಾರ ರಾತ್ರಿ ಲಾಸ್ ವೇಗಸ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರ ವೇಳೆ ಸ್ವಯಂಚಾಲಿತ ಬಂದೂಕಿನಿಂದ ಗುಂಡಿನಮಳೆಗೈದ ಪ್ಯಾಡಕ್ 59 ಮಂದಿಯನ್ನು ಹತ್ಯೆ ಮಾಡಿದ್ದಾನೆ ಹಾಗೂ 500ಕ್ಕೂ ಅಧಿಕ ಮಂದಿಯನ್ನು ಗಾಯಗೊಳಿಸಿದ್ದಾನೆ.
ಇದು ಆಧುನಿಕ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಭೀಕರ ಹತ್ಯಾಕಾಂಡವಾಗಿದೆ.
ಪಾತಕಿಯ ಗೆಳತಿ 62 ವರ್ಷದ ಮರಿಲೂ ಡ್ಯಾನ್ಲಿಯನ್ನು ಅಧಿಕಾರಿಗಳು ತನಿಖೆಗೊಳಪಡಿಸಿದ್ದಾರಾದರೂ, ಅವರು ಎಫ್‌ಬಿಐಯ ಸುಪರ್ದಿಯಲ್ಲಿಲ್ಲ. ಅವರು ಎಲ್ಲಿಗೆ ಬೇಕಾದರೂ ಹೋಗಬಹುದಾಗಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
ರವಿವಾರ ರಾತ್ರಿ ತಾನು ತಂಗಿದ್ದ ಹೊಟೇಲ್‌ನ 32ನೆ ಮಹಡಿಯಿಂದ ಶಕ್ತಿಶಾಲಿ ರೈಫಲ್‌ಗಳಿಂದ ಪ್ಯಾಡಕ್ ಜನ ಸಾಗರದ ಮೇಲೆ ದಾಳಿ ನಡೆಸಿದಾಗ ಆತನ ಪ್ರಿಯತಮೆ ಫಿಲಿಪ್ಪೀನ್ಸ್‌ನಲ್ಲಿದ್ದರು.
ಡ್ಯಾನ್ಲಿ ಆಸ್ಟ್ರೇಲಿಯ ನಾಗರಿಕರಾಗಿದ್ದು, 20 ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು ಎಂದು ಆಸ್ಟ್ರೇಲಿಯ ಸರಕಾರ ಮಂಗಳವಾರ ತಿಳಿಸಿದೆ.