ಓರ್ವ ಮೀನುಗಾರ ಮೃತ್ಯು: ಇನ್ನೋರ್ವನಿಗೆ ಗಾಯ
ಮಂಗಳೂರು, ಅ. 4: ಹಳೆ ಬಂದರು ದಕ್ಕೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಲ್ಲಿ ಕಬ್ಬಿಣದ ರಾಡ್ ತಗುಲಿ ಓರ್ವ ಮೀನುಗಾರ ಸಾವನ್ನಪ್ಪಿದ್ದು, ಇನ್ನೋರ್ವ ಗಾಯಗೊಂಡಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಬೋಟ್‌ನ ಸಿಬ್ಬಂದಿ ಆಂಧ್ರದ ನೆಲ್ಲೂರಿನ ಪೊಕ್ಕಿಮಗಾಡಿ ಬಾಬು (45) ಎಂಬವರು ಸಾವನ್ನಪ್ಪಿದ್ದು, ವೈಲಾ ಬಾಬು ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
‘ಜಲ ಶಾಂತಿ’ಎಂಬ ಬೋಟ್ ಅ. 2 ರಂದು ಮೀನುಗಾರಿಕೆಗೆ ತೆರಳಿತ್ತು. ಅದರಲ್ಲಿ ಚಾಲಕ ಈಶ್ವರಯ್ಯ ಸಹಿತ 10 ಮಂದಿ ಸಿಬ್ಬಂದಿ ಇದ್ದರು. ಮೀನುಗಾರಿಕೆಗೆ ಬಲೆ ಬೀಸುತ್ತಿದ್ದಾಗ ಬಲೆಯ ರೋಪ್ ಬಿಡುವ ಸಾಧನ ಇಂಚ್ ಲೈನರ್ ವೆಲ್ಡಿಂಗ್ ಸಮೇತ ಕಿತ್ತು ಬಂದಿದ್ದು, ಈ ಸಂದರ್ಭದಲ್ಲಿ ಅದರ ಕಬ್ಬಿಣದ ರಾಡ್ ಬೋಟ್‌ನಲ್ಲಿದ್ದ ವೈಲಾ ಬಾಬು ಮತ್ತು ಪೊಕ್ಕಿಮಗಾಡಿ ಬಾಬು ಅವರಿಗೆ ಬಡಿದಿತ್ತು. ಇದರಿಂದ ಇಬ್ಬರೂ ಗಾಯಗೊಂಡಿದ್ದರು. ಬೋಟ್‌ನ ಸಿಬ್ಬಂದಿ ಮೀನು ಗಾರಿಕೆಯನ್ನು ಅರ್ಧದಲ್ಲಿಯೇ ನಿಲ್ಲಿಸಿ ಬೋಟ್‌ನ್ನು ಹಳೆ ಬಂದರು ಧಕ್ಕೆ ಕಡೆಗೆ ಚಲಾಯಿಸಿ ಧಕ್ಕೆಗೆ ತಲುಪಿದ್ದಾರೆ. ಅಷ್ಟರಲ್ಲಿ ಪೊಕ್ಕಿಮಗಾಡಿ ಬಾಬು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.