×
Ad

ಬಾಳೂರು ಹೋಬಳಿಯನ್ನು ಕಳಸ ತಾಲೂಕು ಸೇರ್ಪಡೆಗೆ ಸಾರ್ವಜನಿಕರಿಂದ ವಿರೋಧ

Update: 2017-10-04 23:19 IST

ಮೂಡಿಗೆರೆ, ಅ.4: ಕಳಸ ತಾಲೂಕು ರಚನೆ ವೇಳೆ ಬಾಳೂರು ಹೋಬಳಿಯನ್ನು ಮೂಡಿಗೆರೆ ತಾಲೂಕಿನಿಂದ ಬೇರ್ಪಡಿಸಿ, ಕಳಸ ತಾಲೂಕಿಗೆ ಸೇರ್ಪಡೆಗೊಳಿಸಲು ಹುನ್ನಾರ ನಡೆಸಲಾಗಿದೆ. ಈ ಹೋಬಳಿಯನ್ನು ಕಳಸ ತಾಲೂಕಿಗೆ ಸೇರ್ಪಡೆಗೊಳಿಸಬಾರದು ಎಂದು ಬಾಳೂರು ಹೋಬಳಿಯ ಸಾರ್ವಜನಿಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.

  ಈಗಾಗಲೇ ಮೂಡಿಗೆರೆ ತಾಲೂಕು ಕೇಂದ್ರಕ್ಕೆ ಬಾಳೂರು ಹೋಬಳಿಯಿಂದ ಕೇವಲ 22 ಕಿ.ಮೀ. ದೂರವಿದ್ದು, ಸರಕಾರಿ ಕಚೇರಿಗಳಿಗೆ ತೆರಳಲು ಅನುಕೂಲವಾಗಿದೆ. ಆದರೆ ಕಳಸ ತಾಲೂಕು ರಚನೆಗೆ ಬಾಳೂರು ಹೋಬಳಿಯನ್ನು ಸೇರ್ಪಡಿಸಿದರೆ ಬಾಳೂರಿನಿಂದ ಕಳಸಕ್ಕೆ 50 ಕಿ.ಮೀ. ದೂರ ಎರಡು ಬಸ್ ಬದಲಾಯಿಸಿ ಸಂಚರಿಸಬೇಕಾಗುತ್ತದೆ. ಇದರಿಂದ ಹೋಬಳಿಯ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ತೀವ್ರ ರೀತಿಯಲ್ಲಿ ತೊಂದರೆ ಎದುರಾಗುತ್ತದೆ.

  ಈ ಬಗ್ಗೆ ಬಾಳೂರು ಗ್ರಾ.ಪಂ.ಯಲ್ಲಿ ಕಳೆದ ಮೂರು ತಿಂಗಳಿನಿಂದಲೂ 4 ಬಾರಿ ಸರ್ವ ಸದಸ್ಯರ ಸಾಮಾನ್ಯ ತುರ್ತು ಸಭೆ ನಡೆಸಿ, ಸರಕಾರ ಕಳಸ ತಾಲೂಕು ರಚನೆ ಮಾಡಿದ್ದಲ್ಲಿ, ಬಾಳೂರು ಹೋಬಳಿಯ 4 ಕಂದಾಯ ಗ್ರಾಮಗಳನ್ನು ಕಳಸ ತಾಲೂಕಿಗೆ ಸೇರ್ಪಡೆಗೊಳಿಸಬಾರದೆಂದು ಒಕ್ಕೋರಲ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಎರಡು ಬಾರಿ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆಯಲಾಗಿದೆ.

  ಕಳಸ ತಾಲೂಕು ಕೇಂದ್ರವಾದರೆ ಕಳಸದಿಂದ ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಗೆ ತೆರಳಲು 120 ಕಿ.ಮೀ. ಅಂತರವಿದೆ. ಮೂಡಿಗೆರೆ ಪಟ್ಟಣದಿಂದ ಚಿಕ್ಕಮಗಳೂರಿಗೆ ಕೇವಲ 30 ಕಿ.ಮಿ. ಅಂತರವಿದೆ. ಇದು ತುಂಬಾ ಹತ್ತಿರವಾಗಿದ್ದು, ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆ.
  ಆದ್ದರಿಂದ ಬಾಳೂರು ಹೋಬಳಿಯನ್ನು ಮೂಡಿಗೆರೆ ತಾಲೂಕಿನಲ್ಲಿಯೆ ಮುಂದುವರೆಸಬೇಕೆಂದು ಬಾಳೂರು ಗ್ರಾ.ಪಂ. ಅಧ್ಯಕ್ಷ ಬಿ.ಎಂ.ಕ್ರಷ್ಣೇಗೌಡ, ಸದಸ್ಯ ಬಿ.ಎಸ್.ಪೂರ್ಣೇಶ್, ಬಾಳೂರು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಹೇಂದ್ರ, ತರುವೆ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ.ಭರತ್, ನಾಗರಾಜು ಆಗ್ರಹಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News