ಪುತ್ತೂರು: ಕರಾವಳಿ ಭಾಗಕ್ಕೆ ಪ್ರತ್ಯೇಕ ಮರಳು ನೀತಿಗೆ ಆಗ್ರಹಿಸಿ ಧರಣಿ
ಪುತ್ತೂರು, ಅ. 7: ಏಕರೂಪದ ಮರಳು ನೀತಿಯನ್ನು ಕೈಬಿಟ್ಟು ಕರಾವಳಿ ಭಾಗದ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸದಿದ್ದರೆ ಮರಳು ಸಾಗಾಟದ ಲಾರಿಗಳನ್ನು ರಸ್ತೆಯಲ್ಲಿ ತಡೆದು ಪ್ರತಿಭಟಸಲಾಗುವುದು ಎಂದು ಪುತ್ತೂರಿನ ಸಾರ್ವಜನಿಕ ಹಿತರಕ್ಷಣಾ ಸಮಿತಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ತಿಳಿಸಿದರು.
ಮರಳು ವಿಚಾರದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ಜನವಿರೋಧಿ ನೀತಿ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಶನಿವಾರ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸರ್ಕಾರಿ ವ್ಯವಸ್ಥೆಯಡಿಯಲ್ಲಿ ಮನೆ ನಿರ್ಮಿಸುವ ಬಡವರಿಗೆ, ದುಡಿದು ಬದುಕುವ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಮರಳು ನೀತಿ ಜಾರಿಗೊಳಿಸಬೇಕಾಗಿದ್ದ ರಾಜ್ಯ ಸರ್ಕಾರ ಸಚಿವರುಗಳ ಜೇಬು ತುಂಬಿಸುವ, ಉದ್ಯಮಿಗಳ ಜೊತೆ ಶಾಮೀಲಾಗಿ ಕೃತಕ ಮರಳು ಅಭಾವ ಸೃಷ್ಟಿಸುವ ಮೂಲಕ ಮರಳು ಹಗರಣ ಹುಟ್ಟುಹಾಕುವ ಕೆಲಸ ಮಾಡುತ್ತಿದೆ. ಚುನಾವಣೆಗೆ ಹಣ ಜೋಡಿಸುವ ಕೆಲಸ ಕರಾವಳಿ ಭಾಗದ ಈ ಮರಳು ಮಾಫಿಯಾದಿಂದ ನಡೆಯುತ್ತಿದೆ ಎಂದು ತಿಳಿಸಿದರು.
ಬಜರಂಗದಳ ಮಂಗಳೂರು ವಿಭಾಗದ ಗೋರಕ್ಷಕ್ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಅವರು ಮಾತನಾಡಿ ರಾಜ್ಯ ಸರ್ಕಾರ ಸಚಿವರುಗಳ ಮತ್ತು ಪ್ರಭಾವಿಗಳ ಜೇಬು ತುಂಬಿಸುವ ಸಲುವಾಗಿಯೇ ಕೃತಕ ಮರಳು ಅಭಾವ ಸೃಷ್ಠಿಸಿ ಜನ ಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಮುಂದಿನ ಶನಿವಾರದೊಳಗೆ ಮರಳು ನೀತಿಯನ್ನು ಸರಿಪಡಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹೋರಾಟ ನಡೆಸಲಾಗುವುದು ಎಂದರು.
ಪುತ್ತೂರಿನ ವೈದ್ಯ ಡಾ.ಎಂ.ಕೆ.ಪ್ರಸಾದ್ ಭಂಡಾರಿ ಅವರು ಮಾತನಾಡಿ ಜಿಲ್ಲೆಯ ಜನತೆ ಮರಳು ಸಿಗದೆ ಪರದಾಡುತ್ತಿದ್ದರೆ ಜಿಲ್ಲೆಯ ಉಸ್ತುವಾರಿ ಸಚಿವರು ಮದುವೆ, ಮುಂಜಿ, ಸಾವು, ಹುಲಿ ವೇಷದಲ್ಲಿ ತಲ್ಲೀನರಾಗಿದ್ದಾರೆ. ಮುಂದಿನ ಚುನಾವಣೆಗೆ ಹಣಗೂಡಿಸುವುದು ಓಟಿಗಾಗಿ ಕೆಲಸ ಮಾಡುವುದೇ ಅವರ ಕೆಲಸವಾಗಿದೆ. ಅರಣ್ಯ ಸಚಿವರಾದ ಅವರಿಗೆ ಅರಣ್ಯ ಇಲಾಖೆಯ ಕಚೇರಿ ಎಲ್ಲಿದೆ ಎಂದು ಗೊತ್ತಿದೆಯೇ ಇಲ್ಲವೋ, ಅವರು ತಿರುಗುತ್ತಾ ರಾಜಕೀಯ ಮಾಡುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ಅವರಿಗೆ ಸಮಯವಿಲ್ಲ ಎಂದರು.
ಪುತ್ತೂರು ತಾಲ್ಲೂಕು ಲಾರಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಗಿರೀಶ್ ಪಡ್ಡಾಯೂರು ಅವರು ಮಾತನಾಡಿ ರೂ.2 ಸಾವಿರ ಬಾಡಿಗೆಗಾಗಿ ಮರಳು ಸಾಗಿಸುವ ಲಾರಿ ಚಾಲಕರು ಜೈಲಿಗೆ ಹೋಗಬೇಕಾಗಿದೆ. ಆದರೆ ಮರಳಿನಿಂದ ಕೋಟಿ ಕೋಟಿ ಸಂಪಾದಿಸುವವರಿಗೆ ಯಾವುದೇ ಕಾನೂನು ಶಿಕ್ಷೆ ಇಲ್ಲ ಎಂದರು. ಈ ಹೋರಾಟಕ್ಕೆ ಲಾರಿ ಚಾಲಕರ ಸಂಪೂರ್ಣ ಬೆಂಬಲವಿದ್ದು, ಎಷ್ಟು ದಿನ ಬೇಕಾದರೂ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಲು ನಾವು ಸಿದ್ದರಿದ್ದೇವೆ ಎಂದರು.
ನಗರಸಭೆಯ ಉಪಾಧ್ಯಕ್ಷ ವಿಶ್ವನಾಥ ಗೌಡ, ಬನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಣಿ ಡಿ.ಗಾಣಿಗ, ಪುತ್ತೂರು ಎಂಜಿನಿಯರ್ಸ್ ಎಸೋಶಿಯೇಸನ್‌ನ ವಸಂತ ಭಟ್ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಪುತ್ತೂರು ಸಾರ್ವಜನಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರಾಕೇಶ್ ನಾಕ್ ಪರ್ಲಡ್ಕ, ಉದ್ಯಮಿ ಜಯಕುಮಾರ್, ಮುಖಂಡರಾದ ಪುರುಷೋತ್ತಮ ಗೌಡ, ಉಮ್ಮರ್ ನರಿಮೊಗ್ರು ಮತ್ತಿತರರು ಇದ್ದರು.
ಪ್ರತಿಭಟನೆಗೆ ಮೊದಲು ಪ್ರತಿಭಟನಕಾರರು ಪುತ್ತೂರಿನ ದರ್ಭೆಯಿಂದ ಮುಖ್ಯರಸ್ತೆಯಾಗಿ ಮಿನಿವಿಧಾನ ಸೌಧವರೆಗೆ ಜಾಥಾ ನಡೆಸಿದರು. ಈ ಜಾಥಾ ವನ್ನು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಉದ್ಘಾಟಿಸಿದರು.