ಉಗ್ರ ಪೋಷಣೆ ನಿಲ್ಲಿಸುವಂತೆ ಒತ್ತಾಯಿಸಲು ಪಾಕ್‌ಗೆ ಅಮೆರಿಕದ ರಾಜತಾಂತ್ರಿಕ ಗಡಣ

Update: 2017-10-07 16:05 GMT

ವಾಶಿಂಗ್ಟನ್, ಅ. 7: ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸುವಂತೆ ಮನವೊಲಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಮುಂದಿನ ವಾರಗಳಲ್ಲಿ ಉನ್ನತ ರಾಜತಾಂತ್ರಿಕ ಮತ್ತು ಸೇನಾ ಸಲಹಾಕಾರರನ್ನು ಕಳುಹಿಸಿಕೊಡಲಿದ್ದಾರೆ.

‘ಅರಾಜಕತೆಯ ದಲ್ಲಾಳಿ’ಗಳಿಗೆ ಪಾಕಿಸ್ತಾನ ಸುರಕ್ಷಿತ ಆಶ್ರಯ ತಾಣಗಳನ್ನು ನೀಡುತ್ತಿದೆ ಎಂಬುದಾಗಿ ಟ್ರಂಪ್ ಆರೋಪಿಸಿದ ವಾರಗಳ ಬಳಿಕ, ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಈ ತಿಂಗಳ ಕೊನೆಯಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.

ಅವರ ಬಳಿಕ, ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಆ ದೇಶಕ್ಕೆ ಹೋಗಲಿದ್ದಾರೆ ಎಂದು ಅಮೆರಿಕದ ಮೂಲಗಳು ಹೇಳಿವೆ.

ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನ ನೀಡುತ್ತಿರುವ ಸರಕಾರಿ ಬೆಂಬಲವನ್ನು ನಿಲ್ಲಿಸುವಂತೆ ಆ ದೇಶದ ಮೇಲೆ ಒತ್ತಡ ಹೇರುವುದಕ್ಕಾಗಿ ಅಮೆರಿಕ ಈ ಕ್ರಮಗಳನ್ನು ತೆಗೆದುಕೊಂಡಿದೆ.

 ವಿವಿಧ ತಾಲಿಬಾನ್ ಬಣಗಳು ಮತ್ತು ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೈನಿಕರು ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ಹೋರಾಡುತ್ತಿರುವ ಸಶಸ್ತ್ರ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿರುವುದಕ್ಕೆ ಅಮೆರಿಕ ತುಂಬಾ ಹಿಂದೆಯೇ ಮುನಿಸಿಕೊಂಡಿತ್ತು.

2011ರಲ್ಲಿ ಪಾಕಿಸ್ತಾನದ ಸೇನಾ ನಿಯೋಜನೆಯ ಪಟ್ಟಣದಲ್ಲಿ ವಾಸಿಸುತ್ತಿದ್ದ ಅಲ್-ಖಾಯಿದಾ ನಾಯಕ ಒಸಾಮ ಬಿನ್ ಲಾದನ್‌ನನ್ನು ಕೊಲ್ಲಲು ಅಂದಿನ ಅಧ್ಯಕ್ಷ ಬರಾಕ್ ಒಬಾಮ ಕಮಾಂಡೋಗಳನ್ನು ಕಳುಹಿಸಿಕೊಟ್ಟ ಬಳಿಕ ಉಭಯ ದೇಶಗಳ ಸಂಬಂಧ ತೀರಾ ಹಳಸಿತ್ತು.

 ‘‘ನಾವು ಪಾಕಿಸ್ತಾನಕ್ಕೆ ಬಿಲಿಯಗಟ್ಟಲೆ ಡಾಲರ್‌ಗಳನ್ನು ನೀಡುತ್ತಿದ್ದೇವೆ. ಆದರೆ ಅವರು ನಮ್ಮ ವಿರುದ್ಧ ಹೋರಾಡುತ್ತಿರುವ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದಾರೆ” ಎಂಬುದಾಗಿ ಟ್ರಂಪ್ ಆಗಸ್ಟ್‌ನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News