×
Ad

ದಕ್ಷಿಣ ಆಫ್ರಿಕ: ಭಾರತ ಮೂಲದ ಮಹಿಳೆಯ ತಲೆ ಕಡಿದಾತನಿಗೆ ಜೀವಾವಧಿ

Update: 2017-10-07 21:53 IST

ಜೊಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕ), ಅ. 7: ಭಾರತೀಯ ಮೂಲದ ಮಹಿಳೆಯೊಬ್ಬರನ್ನು ಅಮಾನುಷವಾಗಿ ತಲೆಕಡಿದು ಕೊಲ್ಲಲು ಪ್ರಚೋದನೆ ನೀಡಿದ್ದಕ್ಕಾಗಿ ದಕ್ಷಿಣ ಆಫ್ರಿಕದ ನ್ಯಾಯಾಲಯವೊಂದು ನಾಟಿ ವೈದ್ಯನೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಮಹಿಳೆಯನ್ನು ಕೊಂದರೆ 1.53 ಲಕ್ಷ ಡಾಲರ್ (ಸುಮಾರು 1 ಕೋಟಿ ರೂಪಾಯಿ) ಕೊಡುವುದಾಗಿ ಆತ ನಾಲ್ವರು ಯುವಕರಿಗೆ ಭರವಸೆ ನೀಡಿದ್ದ.

ಮಾಟ ಮಾಡುವುದಕ್ಕಾಗಿ ಭಾರತೀಯ ಅಥವಾ ಬಿಳಿಯ ಅಥವಾ ಮಿಶ್ರ ಜನಾಂಗದ ಮಹಿಳೆಯೊಬ್ಬರ ತಲೆ ತಂದರೆ 2 ಮಿಲಿಯ ರ್ಯಾಂಡ್ (1.53 ಲಕ್ಷ ಡಾಲರ್) ಕೊಡುವುದಾಗಿ ಸಿಬೊನಕಲಿಸೊ ಮಬಿಲಿಯು ಎಂಬಾತ ನಾಲ್ವರು ಸಹ ಆರೋಪಿಗಳ ಪೈಕಿ ಒಬ್ಬನಾಗಿರುವ ಫಲಾಕೆ ಖುಮಾಲೊಗೆ ಭರವಸೆ ನೀಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಖುಮಾಲೊ, ಇತರ ಮೂವರು ಯುವಕರ ನೆರವಿನೊಂದಿಗೆ, ಭಾರತ ಮೂಲದ ಡಿಸೈರೀ ಮುರುಗನ್ ಎಂಬ ಮಹಿಳೆಯನ್ನು 2014ರಲ್ಲಿ ಡರ್ಬನ್ ಸಮೀಪದ ಭಾರತೀಯ ಟೌನ್‌ಶಿಪ್ ಚಾಟ್ಸ್‌ವರ್ತ್‌ನಲ್ಲಿರುವ ಕ್ರೀಡಾಂಗಣವೊಂದಕ್ಕೆ ಕರೆದುಕೊಂಡು ಹೋಗಿದ್ದ. ನಂತರ ಆ ನಾಲ್ವರು ಆಕೆಯ ತಲೆಯನ್ನು ಕಡಿದಿದ್ದರು.

ಈಗಾಗಲೇ ತಪ್ಪೊಪ್ಪಿಕೊಂಡಿರುವ ಖುಮಾಲೊ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಇತರ ಹಂತಕರ ಪೈಕಿ ಇಬ್ಬರಿಗೆ ತಲಾ 15 ವರ್ಷ ಜೈಲು ಮತ್ತು ಇನ್ನೊಬ್ಬನಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಬಲಿಗಾಗಿ ಮಹಿಳೆಯನ್ನು ಗುರುತಿಸಿದ್ದ ವ್ಯಕ್ತಿಗೆ 12 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News