ಅ.15ರಂದು ಉಡುಪಿಯಲ್ಲಿ ಸಾವಯವ ಸಂತೆ
ಉಡುಪಿ, ಅ.7: ಜಿಲ್ಲೆಯ ಪ್ರಪ್ರಥಮ ಸಾವಯವ ಸಂತೆಯು ಅ.15ರಂದು ದೊಡ್ಡನಗುಡ್ಡೆ ಶಿವಳ್ಳಿ ತೋಟಗಾರಿಕಾ ಕ್ಷೇತ್ರದ ಪುಷ್ಪ ಹ ರಾಜು ಕೇಂದ್ರದಲ್ಲಿ ನಡೆಯಲಿದೆ.
ಸಾವಯವ ಸಂತೆಯಲ್ಲಿ ವಿವಿಧ ರೀತಿಯ ದೇಸಿ ತಳಿಯ ಅಕ್ಕಿ, ಅವಲಕ್ಕಿ, ಸಿರಿಧಾನ್ಯಗಳಾದ ಸಾಮೆ, ನವಣೆ, ಹಾರಕ, ಊದಲು, ಸಜ್ಜೆ, ಬರಗು, ರಾಗಿ ಹಾಗೂ ಇವುಗಳ ಹಿಟ್ಟು, ವಿವಿಧ ರೀತಿಯ ಬೇಳೆಕಾಳುಗಳು, ಎಣ್ಣೆ, ಬೆಲ್ಲ, ಗೋಡಂಬಿ, ದ್ರಾಕ್ಷಿ, ಖರ್ಜೂರ, ಸಾಂಬಾರು ಪದಾರ್ಥಗಳು, ತರಕಾರಿಗಳಾದ ಬೆಂಡೆ, ಹಾಗಲಕಾಯಿ, ಗಡ್ಡೆ ತರಕಾರಿ, ಬಸಳೆ, ಸಾಂಬಾರು ಸೌತೆ, ಟೊಮೆಟೊ, ಹಸಿಮೆಣಸು, ತೊಂಡೆ, ಬದನೆ, ಬೀನ್ಸ್, ಕುಂಬಳಕಾಯಿ, ಸಾಂಬಾರು ಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ, ಜೀರಿಗೆ ಮೆಣಸು, ವೀಳ್ಯದೆಲೆ, ಪಚ್ಚೆಬಾಳೆ, ಪುಟ್ಟಬಾಳೆ, ಹೆಬ್ಬೆಲಸು, ಚಿಕ್ಕು, ಹೀರೆಕಾಯಿ, ಸೋರೆಕಾಯಿ, ಸೌತೆಕಾಯಿ, ವಿವಿಧ ರೀತಿಯ ಹಣ್ಣುಗಳು, ತೆಂಗು ಹೀಗೆ ಹತ್ತು ಹಲವು ಸಾವಯವ ಉತ್ಪನ್ನಗಳು ಲಭಿಸಲಿವೆ.
ಸಾವಯವ ಗ್ರಾಮ ಹಾಗೂ ಸಾವಯವ ರೈತರು ಬೆಳೆದಿರುವ ಉತ್ಪನ್ನಗಳು ಈ ಸಂತೆಯಲ್ಲಿ ಲಭಿಸಲಿದ್ದು, ಉಡುಪಿ ಸುತ್ತಮುತ್ತಲಿನ ಗ್ರಾಹಕರು ಹಾಗೂ ನೊಂದಾಯಿತ ಸಾವಯವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾವಯವ ಸಂತೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.