×
Ad

2018ರ ವೇಳೆಗೆ ಹಜ್ ಸಬ್ಸಿಡಿಯ ರದ್ದತಿಗೆ ಕರಡು ಪ್ರಸ್ತಾವನೆ ಸಿದ್ಧ

Update: 2017-10-07 23:02 IST

ಹೊಸದಿಲ್ಲಿ,ಅ.7: ಮಾಜಿ ಕಾರ್ಯದರ್ಶಿ ಅಫ್ಝಲ್ ಅಮಾನುಲ್ಲಾ ಅವರ ಅಧ್ಯಕ್ಷತೆಯ ಸಮಿತಿಯು ಹಜ್ ನೀತಿ 2018-22ರ ಕರಡು ಪ್ರಸ್ತಾವನೆಯನ್ನು ಶನಿವಾರ ಸರಕಾರಕ್ಕೆ ಸಲ್ಲಿಸಿದ್ದು, ಹಜ್ ಯಾತ್ರಿಗಳಿಗೆ ಸಬ್ಸಿಡಿ ರದ್ದತಿ ಮತ್ತು 45 ವರ್ಷ ಮೇಲ್ಪಟ್ಟ ಮಹಿಳೆಯರು ಕನಿಷ್ಠ ನಾಲ್ವರ ಗುಂಪಾಗಿ ರಕ್ತಸಂಬಂಧಿ ಪುರುಷನ ಅನುಪಸ್ಥಿತಿಯಲ್ಲಿ ಹಜ್‌ಗೆ ತೆರಳಲು ಅನುಮತಿ ಇವು ಈ ಪ್ರಸ್ತಾವನೆಯ ಕೆಲವು ಮುಖ್ಯಾಂಶಗಳಲ್ಲಿ ಸೇರಿವೆ.

ಹಜ್ ಯಾತ್ರಿಗಳು ಸೌದಿ ಅರೇಬಿಯಾದ ವಿಮಾನವನ್ನು ಹತ್ತಲು ಅವಕಾಶವಿರುವ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ಈಗಿನ 21ರಿಂದ 9ಕ್ಕೆ ತಗ್ಗಿಸುವಂತೆಯೂ ಸಮಿತಿಯು ಶಿಫಾರಸು ಮಾಡಿದೆ.

ಸಮಿತಿಯು ಮುಂಬೈನಲ್ಲಿ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ ಅಬ್ಬಾಸ್ ನಕ್ವಿ ಅವರಿಗೆ ತನ್ನ ಪ್ರಸ್ತಾವನೆಯನ್ನು ಸಲ್ಲಿಸಿತು.

2018ರ ಹಜ್ ಯಾತ್ರೆಯು ನೂತನ ಹಜ್ ನೀತಿಗನುಗುಣವಾಗಿ ನಡೆಯಲಿದೆ. ಪ್ರಸ್ತಾವಿತ ಸೌಲಭ್ಯಗಳನ್ನು ಗಮನಿಸಿದರೆ ಇದೊಂದು ಉತ್ತಮ ನೀತಿಯಾಗಿದೆ. ಇದು ಪಾರದರ್ಶಕ ಮತ್ತು ಜನಸ್ನೇಹಿ ನೀತಿಯಾಗಲಿದೆ. ಅದು ಯಾತ್ರಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲಿದೆ ಎಂದು ನಕ್ವಿ ಹೇಳಿದರು.

2022ರ ವೇಳೆಗೆ ಹಜ್ ಸಬ್ಸಿಡಿಯನ್ನು ಹಂತಹಂತವಾಗಿ ರದ್ದುಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿ 2012ರಲ್ಲಿ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ್ದ ಹಿನ್ನೆಲೆಯಲ್ಲಿ ನೂತನ ನೀತಿಯನ್ನು ರೂಪಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿದವು.

ಸಬ್ಸಿಡಿಯನ್ನು ರದ್ದುಗೊಳಿಸುವುದು ನೀತಿಯ ಮುಖ್ಯಾಂಶವಾಗಿದೆ. ಅಲ್ಲದೆ 45 ವರ್ಷಕ್ಕೂ ಮೇಲಿನ ಮಹಿಳೆಯರು ಕನಿಷ್ಠ ನಾಲ್ವರ ಗುಂಪಾಗಿ ಪುರುಷ ಮೆಹ್ರಾಂ ನೆರವಿಲ್ಲದೆ ಯಾತ್ರೆಯನ್ನು ಕೈಗೊಳ್ಳಲು ಅನುಮತಿ ನೀಡುವುದು ಪ್ರಸ್ತಾವಿತ ಇನ್ನೊಂದು ಪ್ರಮುಖ ಸುಧಾರಣೆಯಾಗಿದೆ. ಈವರೆಗೆ ಮಹಿಳೆಯರು ಪುರುಷ ಮೆಹ್ರಾಂ ಅನುಪಸ್ಥಿತಿಯಲ್ಲಿ ಹಜ್ ಯಾತ್ರೆ ಕೈಗೊಳ್ಳಲು ಅವಕಾಶವಿರಲಿಲ್ಲ, ಆದರೆ 45 ವರ್ಷಕ್ಕೂ ಕಡಿಮೆ ವಯೋಮಾನದ ಮಹಿಳೆಯರಿಗೆ ಈ ನಿರ್ಬಂಧ ಮುಂದುವರಿಯುತ್ತದೆ ಎಂದು ಮೂಲಗಳು ತಿಳಿಸಿದವು.

ಸಬ್ಸಿಡಿ ನಿಧಿಯನ್ನು ಮುಸ್ಲಿಮರ ಶೈಕ್ಷಣಿಕ ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ಬಳಸಲಾಗುವುದು ಎಂದು ಅವು ಹೇಳಿದವು.

 ಹಡಗುಗಳ ಮೂಲಕ ಹಜ್ ಯಾತ್ರಿಗಳಿಗೆ ಪ್ರಯಾಣ ಸೌಲಭ್ಯ ಕಲ್ಪಿಸುವುದನ್ನೂ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News