×
Ad

ವಿದ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕೆ ಅಗತ್ಯ ಸೌಲಭ್ಯ: ಪ್ರಮೋದ್

Update: 2017-10-07 23:06 IST

ಉಡುಪಿ, ಅ.7: ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಲು ಸರಕಾರ ಕ್ರಮಕೈಗೊಂಡಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಪುರಭವನದಲ್ಲಿ ಶನಿವಾರ ನಡೆದ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಕ್ಷಕ-ಶಿಕ್ಷಕ ಸಮಾವೇಶವನ್ನು ಉದ್ಘಾಟಿಸಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಪ್ರಮೋದ್ ಮಾತನಾಡುತಿದ್ದರು.

ಬಹು ಸಮಯದ ಬಳಿಕ ರಾಜ್ಯ ಸರಕಾರ ರಾಜ್ಯದಲ್ಲಿ 2000 ಸಹಾಯಕ ಪ್ರೊಪೆಸರ್‌ಗಳನ್ನು ನೇಮಕಗೊಳಿಸಿದೆ. ಇದರಲ್ಲಿ ಐವರು ಮಹಿಳಾ ಕಾಲೇಜಿಗೆ ಆಯ್ಕೆಯಾಗಿದ್ದಾರೆ. ಕಾಲೇಜಿಗೆ ಅಗತ್ಯವಿರುವ ಪ್ರಾಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗಿದೆ ಎಂದು ಪ್ರಮೋದ್ ಹೇಳಿದರು.

2003ರಲ್ಲಿ ಸ್ಥಾಪನೆಗೊಂಡ ಈ ಕಾಲೇಜಿನಲ್ಲಿ ಈಗ 2000 ಮಂದಿ ಮಹಿಳೆಯರು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡುತಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಯಲು ಸುಲಭವಾಗುವಂತೆ ರಿಯಾಯಿತಿ ದರದಲ್ಲಿ ನರ್ಮ್ ಬಸ್‌ಗಳು ಓಡಾಡುತ್ತಿವೆ. ಇವುಗಳ ಪ್ರಯೋಜನವನ್ನು ನಮ್ಮ ವಿದ್ಯಾರ್ಥಿನಿಯರು ಪಡೆಯಬೇಕು ಎಂದರು.

ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದಕ್ಕಿಂತ ಹೆತ್ತವರಿಗೆ ದೊಡ್ಡ ಆಸ್ತಿ ಬೇರೆ ಇಲ್ಲ. ಈಗ ಸರಕಾರಿ ಶಾಲಾ-ಕಾಲೇಜುಗಳಲ್ಲಿ ಖಾಸಗಿ ಕಾಲೇಜುಗಳಿಗೆ ಕಡಿಮೆ ಇಲ್ಲದಂತೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಅತಿ ಕಡಿಮೆ ಶುಲ್ಕದಲ್ಲಿ ದೊರಕುವ ಈ ಸೌಲಭ್ಯವನ್ನು ಹೆತ್ತವರು ಪಡೆದುಕೊಳ್ಳಬೇಕು ಎಂದರು.

ಬೆಳಗಾವಿ ಸರಕಾರಿ ಪ.ಪೂ.ಕಾಲೇಜಿನ ಪ್ರಿಯಾಕಾರಣಿ ರಾಜೇಶ್ ಅವರು ದಿಕ್ಸೂಚಿ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ. ಜಗದೀಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸಮಿತಿಯ ಸದಸ್ಯ ಯಶ್ಪಾಲ್ ಸುವರ್ಣ, ಹರಿಣಿ ದಾಮೋದರ್, ರಕ್ಷಕ-ಶಿಕ್ಷಕ ಸಂಘದ ಉಮೇಶ್ ಕೆ.ಶೆಟ್ಟಿ, ಅನಿತಾ, ಕೇದಾರ್‌ನಾಥ್ ಕಿಶೋರ್ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ.ರಾಮರಾಯ ಆಚಾರ್ಯ ಅತಿಥಿಗಳನ್ನು ಸ್ವಾಗತಿಸಿದರೆ, ಡಾ.ರೋಶನ್‌ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News