ಜಿಎಸ್‌ಟಿ ಹಠಾತ್ ನಿರ್ಧಾರವಲ್ಲ: ಸಂಸದ ನಳಿನ್
ಮಂಗಳೂರು, ಆ.7: ಜಿಎಸ್‌ಟಿ ಎನ್‌ಡಿಎ ಸರಕಾರದ ಹಠಾತ್ ನಿರ್ಧಾರವಲ್ಲ. ಅದಕ್ಕೆ ಹತ್ತಾರು ವರ್ಷದ ಪರಿಶ್ರಮವಿದೆ. ಈ ಹಿಂದಿನ ಎನ್‌ಡಿಎ ಹಾಗು ಯುಪಿಎ ಸರಕಾರದಲ್ಲೂ ಈ ಬಗ್ಗೆ ವಿಸ್ತೃತ ಚರ್ಚೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅದನ್ನೀಗ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಜಿಎಸ್‌ಟಿ ‘ಸಾಧಕ-ಭಾದಕ’ದ ಬಗ್ಗೆ ನಗರದ ಡೊಂಗರಕೇರಿಯ ಕೆನರಾ ಪ್ರೌಢಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಎಸ್‌ಟಿ ಜಾರಿಗೊಳಿಸಿ 6 ತಿಂಗಳಾಗುತ್ತಾ ಬಂದಿದೆ. ಆರಂಭದಲ್ಲಿ ಪ್ರಧಾನಿ ಸಂಸದರನ್ನು ಕರೆದು 6 ತಿಂಗಳವರೆಗೆ ಈ ಬಗ್ಗೆ ಏನನ್ನೂ ಮಾತನಾಡಬೇಡಿ. ಬಳಿಕ ಸಾರ್ವಜನಿಕರ, ವ್ಯಾಪಾರಿಗಳ ಸಭೆ ಕರೆದು ಚರ್ಚೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಅದರಂತೆ ಇಂದು ಸಭೆ ಕರೆಯಲಾಗಿದೆ. ಇದು ಅತ್ಯಂತ ಸರಳೀಕೃತ ತೆರಿಗೆ ಕ್ರಮವಾಗಿದೆ. ಆರಂಭದಲ್ಲಿ ಕೆಲವು ಕಡೆಯಿಂದ ಇದಕ್ಕೆ ಅಪಸ್ವರ ಕೇಳಿ ಬಂದರೂ ಇದೀಗ ಸಾರ್ವಜನಿಕರು ಇದರ ಪ್ರಯೋಜನ ಏನು ಎಂಬುದನ್ನು ತಿಳಿದುಕೊಂಡಿದ್ದಾರೆ. ಅಲ್ಲದೆ ‘ಜಿಎಸ್‌ಟಿ’ಗೆ ಜನರು ಒಗ್ಗಿಕೊಳ್ಳುತ್ತಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ದೇಶಕ್ಕೊಂದೇ ತೆರಿಗೆ ಇರಬೇಕು ಎಂಬುದು ಪ್ರಧಾನಿಯ ಕನಸಾಗಿದೆ. ಅದರಂತೆ ಅದನ್ನು ಈಡೇರಿಸಲು ಮುಂದಾದಾಗ ಕೆಲವು ಸಮಸ್ಯೆಗಳಾದುದು ನಿಜ. ಅದಕ್ಕೆ ಪ್ರಧಾನಿ ಪರಿಹಾರ ಕಲ್ಪಿಸಲಿದ್ದಾರೆ. ಇದು ಜನರ ಅಪೇಕ್ಷೆಯ ಮೇರೆಗೆ ಆದ ತೀರ್ಮಾನವಾಗಿದೆ. ಇದು ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಜಿಲ್ಲೆಯಲ್ಲಿ ಹೆಚ್ಚಿನ ಜನರು ಗೇರು, ಹೆಂಚು, ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕ್ಷೇತ್ರವು ಎದುರಿಸುವ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗು ವುದು ಎಂದು ನಳಿನ್ ಕುಮಾರ್ ಕಟೀಲ್ ನುಡಿದರು.
ಸಾರ್ವಜನಿಕರ ಸಮಸ್ಯೆಗೆ ಬಿಜೆಪಿಯ ಲೆಕ್ಕಪ್ರಕೋಷ್ಠದ ಶಾಂತರಾಮ ಶೆಟ್ಟಿ, ಜಗನ್ನಾಥ ಕಾಮತ್ ಉತ್ತರಿಸಿದರು. ಗೌತಮ್ ಪೈ ಕಾರ್ಯಕ್ರಮ ನಿರೂಪಿಸಿದರು.
ನನಗೆ ‘ಜಿಎಸ್‌ಟಿ’ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನನಗೆ ತಿಳಿದ ಅಂಶಗಳನ್ನು ನಿಮ್ಮ ಮುಂದಿಟ್ಟಿದ್ದೇನೆ. ಈ ಬಗ್ಗೆಗಿನ ಸಮಸ್ಯೆಗಳ ಕುರಿತು ಆರ್ಥಿಕ ತಜ್ಞರು ಉತ್ತರಿಸಲಿದ್ದಾರೆ ಎಂದ ನಳಿನ್, ಮೊನ್ನೆ ಅಮಿತ್ ಶಾ ಕೇರಳ ಮತ್ತು ಮಂಗಳೂರಿನ ಪ್ರವಾಸ ಮೊಟಕುಗೊಳಿಸಿ ಹೊಸದಿಲ್ಲಿಗೆ ತೆರಳಲು ಜಿಎಸ್‌ಟಿ ಕಾರಣವಾಗಿತ್ತು. ಪ್ರಧಾನಿಯ ಸೂಚನೆಯ ಮೇರೆಗೆ ಕೇಂದ್ರ ವಿತ್ತ ಸಚಿವರ ಜೊತೆ ಚರ್ಚೆ ನಡೆಸಲು ಅಮಿತ್ ಶಾ ಪ್ರವಾಸ ಮೊಟಕುಗೊಳಿಸಬೇಕಾಗಿ ಬಂತು ಎಂದರು.