ಕೀಟನಾಶಕ ಸಿಂಪಡಣೆಯ ವೇಳೆ ವಿಷಕಾರಿ ಗಾಳಿ ಸೇವನೆ: 20 ರೈತರು ಮೃತ್ಯು
ಹೊಸದಿಲ್ಲಿ, ಅ.8: ಕೀಟನಾಶಕ ಸಿಂಪಡಣೆಯ ವೇಳೆ ವಿಷಕಾರಿ ಗಾಳಿಯನ್ನು ಉಸಿರಾಡಿದ ಪರಿಣಾಮ 20 ರೈತರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ನಡೆದಿದೆ.
ಕಿಟನಾಶಕಗಳ ಸಿಂಪಡಣೆಯ ವೇಳೆ ವಿಷಕಾರಿ ಗಾಳಿಯನ್ನು ಉಸಿರಾಡಿದ್ದರಿಂದ 700 ರೈತರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆ ಸೇರಿದ್ದಾರೆ. 25 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ರೈತ ಮುಖಂಡರೋರ್ವರು ತಿಳಿಸಿರುವುದಾಗಿ ವರದಿಯಾಗಿದೆ.
“ರೈತರಿಗೆ ಯಾವ ಸಹಾಯವೂ ಸಿಗುತ್ತಿಲ್ಲ. ಬದಲಾಗಿ ಅವರು ತಮ್ಮ ಜೀವವನ್ನು ಈ ರೀತಿ ಕಳೆದುಕೊಳ್ಳುತ್ತಿದ್ದಾರೆ. ನಾವು ಈ ಪ್ರಕರಣವನ್ನು ಕೋರ್ಟ್ ಗೆ ಒಯ್ಯುತ್ತೇವೆ” ಎಂದು ರೈತ ಮುಖಂಡ ದೇವಾನಂದ್ ಪವಾರ್ ತಿಳಿಸಿದ್ದಾರೆ.
“ರೈತರು ಮುನ್ನೆಚ್ಚರಿಕಾ ಕ್ರಮವನ್ನು ಪಾಲಿಸುತ್ತಿಲ್ಲ. ಕೀಟನಾಶಕಗಳನ್ನು ಸಿಂಪಡಿಸುವ ವೇಳೆ ಅವರು ಮುಖವನ್ನು ಮುಚ್ಚಬೇಕು” ಎಂದು ಮಹಾರಾಷ್ಟ್ರ ಸರಕಾರದ ಅಧೀನದ ವಿಎನ್ ಎಸ್ ಎಸ್ ಎಂ ನ ಮುಖ್ಯಸ್ಥ ಕಿಶೋರ್ ತಿವಾರಿ ಹೇಳಿದ್ದಾರೆ.
ವಿಎನ್ ಎಸ್ ಎಸ್ ಎಂ ಕೃಷಿ ಸಂಬಂಧಿತ ಸಂಸ್ಥೆಯಾಗಿದೆ.