ರಾಜ್ಯದಾದ್ಯಂತ ಸಂಪೂರ್ಣ ಪಾನ ನಿಷೇಧ ಜಾರಿಗೆ ಒತ್ತಾಯ
ಬಂಟ್ವಾಳ, ಅ. 8: ರಾಜ್ಯದಾದ್ಯಂತ ಸಂಪೂರ್ಣ ಪಾನ ನಿಷೇಧ ಜಾರಿಗೊಳಿಸಬೇಕು ಹಾಗೂ ಮದ್ಯಮುಕ್ತ ಚುನಾವಣೆ ನಡೆಸಬೇಕು ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸರಕಾರವನ್ನು ಒತ್ತಾಯಿಸಿದೆ.
ಬಂಟ್ವಾಳದಲ್ಲಿ ನಡೆದ ಮದ್ಯವರ್ಜಿತರ ಅಭಿನಂದನೆ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ಮನವಿ ಸಲ್ಲಿಸಲಾಯಿತು.
ಅಬಕಾರಿ ಟಾರ್ಗೆಟ್ ಪದ್ಧತಿಯನ್ನು ರದ್ದುಗೊಳಿಸಿ, ಅಬಕಾರಿ ಕಾಯ್ದೆ ತಿದ್ದುಪಡಿ ಮಾಡಬೇಕು. ಜನತೆಗೆ ನೆಮ್ಮದಿಯಿಂದ ಬದುಕಲು ಸಹಕರಿಸಬೇಕು. ಅಲ್ಲದೆ ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮದ್ಯಪಾನ ಮತ್ತಿತರ ದುಶ್ಚಟಗಳ ವಿರುದ್ಧ ಜನಜಾಗೃತಿ ಮೂಡಿಸುವ ಪಠ್ಯಗಳನ್ನು ಅಳವಡಿಸಬೇಕು ಎಂದು ಮನವಿ ಯಲ್ಲಿ ಒತ್ತಾಯಿಸಲಾಗಿದೆ.
ಮದ್ಯಪಾನದಿಂದ ಉಂಟಾಗುವ ಕಷ್ಟ, ಸರಕಾರದ ಬೊಕ್ಕಸಕ್ಕೆ ಆಗುವ ನಷ್ಟದ ಕುರಿತು ವೈಜ್ಞಾನಿಕ ಅಧ್ಯಯನ ಮಾಡಲು ಸಮಿತಿ ರಚಿಸಿ, ವರದಿ ಹೊರ ತಂದು ಜನರಿಗೆ ಮನವರಿಕೆ ಮಾಡಬೇಕು ಎಂದು ವೇದಿಕೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮತ್ತು ತಾಲೂಕು ಅಧ್ಯಕ್ಷ ಪ್ರಕಾಶ ಕಾರಂತ ಮತ್ತಿತರರು ಇದ್ದರು.