ಎಲ್ಲಾ ಧರ್ಮಗಳನ್ನು ಪ್ರೀತಿಸುವ ಕೆಲಸವಾಗಲಿ: ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು

Update: 2017-10-08 15:23 GMT

ಉಡುಪಿ, ಅ.8: ಸುಂದರವಾಗಿ ಹಾಗೂ ಮನುಷ್ಯತ್ವದಿಂದ ಬದುಕುವುದೇ ಮನುಷ್ಯ ಧರ್ಮ. ನಾವೂ ಬದುಕಿ, ಇತರರಿಗೂ ಬದುಕಲು ಅವಕಾಶ ನೀಡುವುದೇ ಮಾನವ ಧರ್ಮವಾಗಿದ್ದು, ಧರ್ಮದ ಹೆಸರಿನಲ್ಲಿ ಅಪರಾಧ ಮಾಡದೆ ಮನುಷ್ಯ ಧರ್ಮವನ್ನು ಗೌರವಿಸಬೇಕು. ಯಾವುದೇ ಧರ್ಮಕ್ಕೆ ಧಕ್ಕೆ ಬಾರದ ಹಾಗೆ ಧರ್ಮ ಸಂಸತ್ ಒಗ್ಗೂಡಬೇಕು. ಎಲ್ಲಾ ಧರ್ಮಗಳನ್ನು ಪ್ರೀತಿಸುವ ಕೆಲಸ ಆಗಬೇಕು ಎಂದು ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ಹೇಳಿದರು.

ಉಡುಪಿಯಲ್ಲಿ ನ. 24ರಿಂದ 26ರವರೆಗೆ ನಡೆಯುವ ಧರ್ಮ ಸಂಸದ್‌ನ ಪೂರ್ವಭಾವಿಯಾಗಿ ಇಂದು ಉಡುಪಿಯ ಧರ್ಮ ಸಂಸದ್ ಕಾರ್ಯಾಲಯ ವಿಜಯ ಧ್ವಜದಲ್ಲಿ ನಡೆದ ಉಡುಪಿ ಜಿಲ್ಲಾ ಮಹಿಳಾ ಕಾರ್ಯಕರ್ತೆಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಾಹಿತ್ಯ, ಸಂಗೀತ, ನಾಟಕ ಎಲ್ಲಾ ಲಲಿತ ಕಲೆಗಳು ಮನುಷ್ಯತ್ವದ ಹುಡುಕಾಟ ಹಾಗೂ ಮನುಷ್ಯನ ಒಳಗಿರುವ ಪಶುತ್ವವನ್ನು ಕಡಿಮೆ ಮಾಡಲು ಹುಟ್ಟಿರು ವುದು. ಆದರೆ ನಾವು ಇಂದಿಗೂ ಮನುಷ್ಯರಾಗಿಲ್ಲ. ನಾನು ಯಾವುದೇ ಧರ್ಮವನ್ನು ದ್ವೇಷಿಸುವುದಿಲ್ಲ. ಎಲ್ಲಾ ಧರ್ಮಗಳಲ್ಲಿ ಒಳಿತು ಹಾಗೂ ಕೆಡುಕುಗಳಿವೆ. ಬೇರೆ ಬೇರೆ ಧರ್ಮಗಳಲ್ಲಿರುವ ಒಳಿತನ್ನು ನಾವು ಸ್ವೀಕರಿಸಬೇಕು. ನಮ್ಮ ಧರ್ಮದಲ್ಲಿರುವ ಒಳಿತನ್ನು ಇತರ ಧರ್ಮದವರು ಸ್ವೀಕರಿಸಬೇಕು. ಹೀಗೆ ಕೊಡು ಕೊಳ್ಳುವಿಕೆ ನಡೆಯುತ್ತಿರಬೇಕು. ಈ ಮೂಲಕ ನಾವು ಮನುಷ್ಯರಾಗಿ ಬದುಕಲು ಸಾಧ್ಯ ಎಂದರು.

ಧರ್ಮ ಇರುವುದು ನಮ್ಮ ಬದುಕಿಗೆ ಚೌಕಟ್ಟು ಹಾಕಿಕೊಳ್ಳಲು. ಅದರೊಳಗೆ ನಾವು ಬದುಕಬೇಕು. ಇಲ್ಲದಿದ್ದರೆ ನಾವು ಪ್ರಾಣಿಗಳಾಗುತ್ತೇವೆ. ಧರ್ಮ ನಮಗೆ ಸಂಯಮ ಕೊಡುತ್ತದೆ. ಇಲ್ಲಿ ಹೃದಯದ ಬಾಗಿಲು ತೆರೆಯುವುದು ಅಗತ್ಯ. ಎಲ್ಲವನ್ನು ಸ್ವೀಕರಿಸುವ ವೈಚಾರಿಕ ಆಧುನಿಕತೆ ಇರಬೇಕು. ಕೇವಲ ಹೊರಗಿನ ವೇಷಭೂಷಣದಲ್ಲಿ ಮಾತ್ರವಲ್ಲ ನಮ್ಮ ಒಳಗಿನ ವಿಚಾರಗಳಲ್ಲಿಯೂ ನಾವು ಆಧುನಿಕರಾಗಬೇಕು. ಧರ್ಮ ಎಂಬುದು ನಂಬಿಕೆ. ನಂಬಿಕೆ ಕಳೆದುಕೊಂಡರೆ ನಾವು ಖಿನ್ನರಾಗುತ್ತೇವೆ. ಇದರಿಂದ ಬದುಕು ಅತಂತ್ರವಾಗಿ ಹೋಗುತ್ತದೆ. ಈ ಕಾರಣಕ್ಕಾಗಿ ದೇವರನ್ನು ನಂಬುದು ಅಗತ್ಯ ಎಂದು ಅವರು ತಿಳಿಸಿದರು.

ಅದ್ಭುತ ಮಾನವೀಯ ಮೌಲ್ಯಗಳಿರುವ ಪುರಾಣದ ಪ್ರತಿಮೆಗಳು ನಮಗೆ ಸಿಕ್ಕಿವೆ. ರಾಮ ಹಾಗೂ ಕೃಷ್ಣ ಮನುಷ್ಯನಾಗಿ ಹುಟ್ಟಿ ಮನುಷ್ಯ ದೇಹದ ಎಲ್ಲಾ ಕಷ್ಟಗಳನ್ನು ಅನುಭವಿಸುತ್ತಾ ಅದ್ಭುತವಾದ ಮಾನವೀಯ ಮೌಲ್ಯಗಳನ್ನು ಬಿಟ್ಟು ಕೊಟ್ಟು ಹೋಗಿದ್ದಾರೆ. ಇದರಿಂದ ಸಮಾಜ ಆರೋಗ್ಯಕರವಾಗಿ ಬದುಕು ತ್ತದೆ. ಹಾಗಾಗಿ ನಾವು ಪುರಾಣದ ಪ್ರತಿಮೆಗಳಾದ ಕಾವ್ಯ, ಸಾಹಿತ್ಯ ಎಲ್ಲವನ್ನು ಬದುಕಿ ನಲ್ಲಿ ಅಳವಡಿಸಿಕೊಂಡಿದ್ದೇವೆ. ಇವೆಲ್ಲವು ನಮ್ಮ ಸುಂದರ ಬದುಕಿ ಗಾಗಿ ಎಂದು ಅವರು ಹೇಳಿದರು.

ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಕೃಷ್ಣಮೂರ್ತಿ ದಿಕ್ಸೂಚಿ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ವಿಹಿಂಪ ಜಿಲ್ಲಾಧ್ಯಕ್ಷ ವಿಲಾಸ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್, ಮಂಗಳೂರು ವಿಭಾಗ ಸಹಸಂಚಾಲಕ ಸುನೀಲ್ ಕೆ.ಆರ್., ವಿಹಿಂಪ ನಗರಾಧ್ಯಕ್ಷ ಸಂತೋಷ್ ಸುವರ್ಣ ಬೊಳ್ಜೆ, ದುರ್ಗಾ ವಾಹಿನಿಯ ಜಿಲ್ಲಾಧ್ಯಕ್ಷೆ ರಮಾ ಜೆ.ರಾವ್, ಮಾತೃ ಮಂಡಳಿಯ ಜಿಲ್ಲಾ ಪ್ರಮುಖ ಪದ್ಮ ರತ್ನಾಕರ ಉಪಸ್ಥಿತರಿದ್ದರು.

ಉಡುಪಿ ವಿಹಿಂಪ ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಸುಮ ವಂದಿಸಿದರು. ಭಾಗ್ಯಶ್ರೀ ಐತಾಳ್ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು.

‘ಶಿಕ್ಷಿತರಾದರೂ ಪಶುಗಳಂತೆ ವರ್ತನೆ’
ನಾನು ಮಂಗಳೂರಿನಲ್ಲಿ ಹುಟ್ಟಿದವಳು. ನಮ್ಮ ಪ್ರದೇಶದಲ್ಲಿ ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರು ಬಹುಸಂಖ್ಯಾತರಾಗಿದ್ದರೆ ನಾವು ಹಿಂದುಗಳು ಅಲ್ಪ ಸಂಖ್ಯಾತರಾಗಿದ್ದೇವು. ಆದರೆ ಅಲ್ಲಿ ಬಹಳ ಸಾಮರಸ್ಯ ಇತ್ತು. ಬದುಕಿನಲ್ಲಿ ಸಹಬಾಳ್ವೆ, ಚೆಲುವು ಇತ್ತು. ನಾವು ಧರ್ಮ ಬೇಧ ಇಲ್ಲದೆ ಬದುಕಿದಂತಹ ಮಣ್ಣು ಅದು. ಆ ಸಮಯದಲ್ಲಿ ಯಾವುದೇ ಹಿಂಸೆ ಇರಲಿಲ್ಲ. ಕೋಮು ಗಲಭೆಯನ್ನು ನಾನು ನೋಡಿಯೇ ಇಲ್ಲ. ಆಗ ಶಿಕ್ಷಿತರು ಕಡಿಮೆ ಇದ್ದರೂ ಹೃದಯವಂತರು ಹೆಚ್ಚಾಗಿ ಇದ್ದರು. ಈಗ ನಾವು ಶಿಕ್ಷಣ ಪಡೆದು ಜ್ಞಾನಿಗಳಾಗುತ್ತಿದ್ದರೂ ಹೆಚ್ಚು ಹೆಚ್ಚು ಹಿಂಸೆಯಲ್ಲಿ ತೊಡಗಿ ಪಶುಪ್ರಾಣಿಗಳಂತೆ ಯಾಕೆ ವರ್ತಿಸುತ್ತಿದ್ದೇವೆ ಎಂದು ಕಾತ್ಯಾಯಿನಿ ಕುಂಜಿಬೆಟ್ಟು ಪ್ರಶ್ನಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News