×
Ad

'ವೈರ್' ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಅಮಿತ್ ಶಾ ಪುತ್ರ ನಿರ್ಧಾರ

Update: 2017-10-08 20:59 IST

ಹೊಸದಿಲ್ಲಿ, ಅ. 8: ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಕಂಪೆನಿ 16,000 ಪಟ್ಟು ವಹಿವಾಟು ನಡೆಸಿದೆ ಎಂದು thewire.in ವಿಶೇಷ ವರದಿ ಪ್ರಕಟಿಸಿದ ಗಂಟೆಗಳ ಬಳಿಕ ಕೇಂದ್ರ ಸಚಿವ ಪಿಯೂಷ್ ಗೋಯಲ್, ಈ ಆರೋಪ ಮಾನಹಾನಿಕರ, ಅವಹೇಳನಕಾರಿ ಹಾಗೂ ಆಧಾರ ರಹಿತ ಎಂದಿದ್ದಾರೆ.

thewire.inನಲ್ಲಿ ಪ್ರಕಟವಾದ ವಿಶೇಷ ಲೇಖನದಲ್ಲಿ ನಿಜವಾಗಿಯೂ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿರುವ ಗೋಯಲ್, ಆನ್‌ಲೈನ್ ಸುದ್ದಿ ಪೋರ್ಟಲ್ ಅಮಿತ್ ಶಾ ಅವರ ಗೌರವಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದೆ ಎಂದಿದ್ದಾರೆ.

thewire.inನ ಮಾಲಕ, ಸಂಪಾದಕ ಹಾಗೂ ಲೇಖಕನ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲು ಅಮಿತ್ ಶಾ ಅವರ ಪುತ್ರ ಜಯ್ ಶಾ ನಿರ್ಧರಿಸಿದ್ದಾರೆ. ಅವರು ಅಹ್ಮದಾಬಾದ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಿದ್ದಾರೆ ಹಾಗೂ 100 ಕೋ. ರೂ. ಪರಿಹಾರ ನೀಡುವಂತೆ ಕೋರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಜಯ್ ಶಾ ಸಂಪೂರ್ಣವಾಗಿ ನ್ಯಾಯಬದ್ಧವಾಗಿ ವ್ಯವಹಾರ ನಡೆಸುತ್ತಿದ್ದಾರೆ ಹಾಗೂ ಎಲ್ಲ ವ್ಯವಹಾರಗಳನ್ನು ಬ್ಯಾಂಕಿಂಗ್ ಮೂಲಕವೇ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಯ್ ಶಾ ಅವರ ಕಂಪೆನಿ ಟೆಂಪಲ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಅಸುರಕ್ಷಿತ ಸಾಲ ಪಡೆದಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಗೋಯಲ್, ಎಲ್ಲ ಸಾಲಗಳನ್ನು ಕಾನೂನಿಗೆ ಅನುಗುಣವಾಗಿ ಪಡೆಯಲಾಗಿದೆ. ಭದ್ರತೆ ಕೂಡ ನೀಡಲಾಗಿದೆ. ಎನ್‌ಡಿಎಫ್‌ಸಿಯಿಂದ ಪಡೆದುಕೊಳ್ಳಲಾದ ಸಾಲವನ್ನು ಬಡ್ಡಿ ಸಮೇತ ಮರು ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News