‘ಬ್ಯಾರಿ’ ಮಾಪಿಳ್ಳೆ ಜನಾಂಗದ ವಿಸ್ತೃತ ರೂಪ: ಬಶೀರ್ ಅಹ್ಮದ್ ಕಿನ್ಯ
ಮಂಗಳೂರು, ಅ.8: ‘ಬ್ಯಾರಿ’ ಎಂಬುದು ಮಾಪಿಳ್ಳೆ ಜನಾಂಗದಿಂದ ರೂಪುಗೊಂಡ ವಿಸ್ತೃತ ಜನಾಂಗವಾಗಿದೆ. ಹಿಜಿರಾ 22ನೆ ವರ್ಷದಲ್ಲಿ ಮಂಗಳೂರು ಮತ್ತು ಬಾರ್ಕೂರ್‌ನಲ್ಲಿ ನಿರ್ಮಾಣಗೊಂಡ ಮಸೀದಿಗಳೇ ಇದಕ್ಕೆ ಸಾಕ್ಷಿ ಎಂದು ಎಂದು ಕವಿ, ಹಾಡುಗಾರ ಬಶೀರ್ ಅಹ್ಮದ್ ಕಿನ್ಯ ಹೇಳಿದರು.
ದೇರಳಕಟ್ಟೆಯ ಬ್ಯಾರಿ ಸಾಹಿತಿ ಮತ್ತು ಕಲಾವಿದರ ಒಕ್ಕೂಟವಾದ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ತನ್ನ ಮನೆಯಲ್ಲಿ ಆಯೋಜಿಸಲಾದ ಬ್ಯಾರಿ ಸಾಹಿತ್ಯ ಸಂವಾದ ಕೂಟದಲ್ಲಿ ‘ಬ್ಯಾರಿ-ಮಾಪಿಳ್ಳೆ ಜನಾಂಗ’ ಎಂಬ ವಿಷಯದಲ್ಲಿ ಅವರು ಮಾತನಾಡಿದರು.
ಬ್ಯಾರಿ ಭಾಷೆ ಮತ್ತು ಸಂಸ್ಕೃತಿಗೆ 1,400 ವರ್ಷಗಳ ಇತಿಹಾಸವಿದೆ ಎಂಬುದು ವಾಸ್ತವವಾಗಿದೆ. ಆದರೆ, ಈ ಬಗ್ಗೆ ಇನ್ನೂ ನಿಖರತೆಗೆ ಬರಲಾಗಲಿಲ್ಲ. ಬ್ಯಾರಿ ಸಂಶೋಧಕರು ಈ ನಿಟ್ಟಿನಲ್ಲಿ ಆಳವಾದ ಅಧ್ಯಯನ ಮಾಡುವ ಅಗತ್ಯವಿದೆ ಎಂದು ಬಶೀರ್ ಅಹ್ಮದ್ ಕಿನ್ಯ ನುಡಿದರು.
‘ಮೇಲ್ತೆನೆ’ ಸಂಘಟನೆಯ ಅಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಬಶೀರ್ ಕಿನ್ಯ ಅವರ ತಂದೆ ಹಾಜಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಮೇಲ್ತೆನೆಯ ಪದಾಧಿಕಾರಿಗಳಾದ ಇಸ್ಮಾಯೀಲ್ ಟಿ., ಇಸ್ಮತ್ ಪಜೀರ್, ಬಶೀರ್ ಕಲ್ಕಟ್ಟ, ಸದಸ್ಯರಾದ ಹಂಝ ಮಲಾರ್, ರಫೀಕ್ ಪಾಣೇಲ, ಅರೀಫ್ ಕಲ್ಕಟ್ಟ, ಮುಹಮ್ಮದ್ ಬಾಷಾ ಉಪಸ್ಥಿತರಿದ್ದರು.