×
Ad

ಉಡುಪಿ: ಮೋಹನ್ ಪೆರ್ಮುದೆ ಚಿತ್ರಕಲಾ ಪ್ರದರ್ಶನ

Update: 2017-10-11 20:01 IST

ಉಡುಪಿ, ಅ.11: ರಜತೋತ್ಸವ ಸಂಭ್ರಮದಲ್ಲಿರುವ ಉಡುಪಿಯ ಆರ್ಟಿಸ್ಟ್ ಫೋರಂನ ಆಶ್ರಯದಲ್ಲಿ ಫೋರಂನ ಸದಸ್ಯರಾದ ಮಂಗಳೂರಿನ ಜನಪ್ರಿಯ ಕಲಾವಿದ ಪೆರ್ಮುದೆ ಮೋಹನ್ ಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವೊಂದು ಉಡುಪಿಯ ಗ್ಯಾಲರಿ ದೃಷ್ಟಿಯಲ್ಲಿ ಅ.14ರಿಂದ 17ರವರೆಗೆ ನಡೆಯಲಿದೆ ಎಂದು ಫೋರಂನ ಕಾರ್ಯದರ್ಶಿ ಸಕು ಪಾಂಗಾಳ ಹೇಳಿದ್ದಾರೆ.

ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋಹನ್ ಪೆರ್ಮುದೆ ಅವರು ಮಂಗಳೂರಿನಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದು, ಈವರೆಗೆ 16ಕ್ಕೂ ಹೆಚ್ಚು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಕರ್ನಾಟಕದ ವಿವಿಧ ನಗರಗಳಲ್ಲಿ ನಡೆಸಿದ್ದಾರೆ. ಅನೇಕ ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ ಎಂದರು.
 

‘ವರ್ಣ ಸಿಂಚನ’ ಶೀರ್ಷಿಕೆಯಲ್ಲಿ ನಡೆಯುವ ಈ ಕಲಾ ಪ್ರದರ್ಶನದಲ್ಲಿ ಕಲಾವಿದ ಮೋಹನ್ ರಚಿಸಿದ ಇತ್ತೀಚಿನ ಜಲವರ್ಣ ಚಿತ್ರಗಳಿವೆ. ಜಲವರ್ಣ ಚಿತ್ರ ರಚನೆಯಲ್ಲಿ ಮೋಹನ್ ಅವರು ತನ್ನದೇ ಆದ ಛಾಪವನ್ನು ಹೊಂದಿದ್ದು, ಸುಂದರ ಪ್ರಕೃತಿ ಚಿತ್ರವನ್ನು ರಚಿಸುವಲ್ಲಿ ನಿಸ್ಸೀಮರೆನಿಸಿದ್ದಾರೆ ಎಂದರು.
 ನಾಲ್ಕು ದಿನಗಳ ಚಿತ್ರಕಲಾ ಪ್ರದರ್ಶನ ಬೆಳಗ್ಗೆ 10ರಿಂದ ರಾತ್ರಿ 7ರವರೆಗೆ ನಡೆಯಲಿದೆ. ಪ್ರದರ್ಶನದ ಉದ್ಘಾಟನೆ ಅ.14ರ ಶನಿವಾರ ಸಂಜೆ 4:30ಕ್ಕೆ ಗ್ಯಾಲರಿ ದೃಷ್ಟಿಯಲ್ಲಿ ನಡೆಯಲಿದೆ. ಖ್ಯಾತ ಕಲಾವಿದ ಗುರುರಾಜ್ ಮಾರ್ಪಳ್ಳಿ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉದ್ಯಮಿ ದಿನೇಶ್ ಪುತ್ರನ್, ಲಯನ್ಸ್ ಕ್ಲಬ್‌ನ ವಲಯ ಅದ್ಯಕ್ಷೆ ಇಂದು ರಮಾನಂ ಭಟ್ ಮುಖ್ಯ ಅತಿಥಿಗಳಾಗಿರುವರು.

ಪತ್ರಿಕಾಗೋಷ್ಠಿಯಲ್ಲಿ ಆರ್ಟಿಸ್ಟ್ ಫೋರಂನ ಉಪಾಧ್ಯಕ್ಷ ಪುರುಷೋತ್ತಮ ಅಡ್ವೆ, ಕಲಾವಿದ ಮೋಹನ್ ಪೆರ್ಮುದೆ, ಕನಕ ಪೆರ್ಮುದೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News