×
Ad

ಅ.13ರಂದು ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನಾ ಸಭೆ

Update: 2017-10-11 20:38 IST

ಮಂಗಳೂರು, ಅ.11: ಬಂಟ್ವಾಳ ಪೊಲೀಸರು ಕೊಲೆ ಪ್ರಕರಣವೊಂದರ ಆರೋಪಿ ಖಲಂದರ್ ಎಂಬಾತನ ಮನೆಯಲ್ಲಿ ತಪಾಸಣೆ ನಡೆಸಿದ ಸಂದರ್ಭ ಮನೆಯಲ್ಲಿದ್ದ ಧಾರ್ಮಿಕ ಗ್ರಂಥ ಕುರ್‌ಆನ್‌ಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿರುವ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಅವರು ಪೊಲೀಸರ ಕ್ರಮವನ್ನು ವಿರೋಧಿಸಿ ಅ.13ರಂದು ಅಪರಾಹ್ನ 3 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ವೊಂದರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಪಾಸಣೆಯ ಸಂದರ್ಭದಲ್ಲಿ ಪೊಲೀಸರು ಮನೆಯಲ್ಲಿದ್ದ ಧಾರ್ಮಿಕ ಗ್ರಂಥವನ್ನು ನೆಲಕ್ಕೆಸೆದು ಅಪಮಾನ ಮಾಡಿದ್ದಾರೆ. ಘಟನೆಯನ್ನು ವರದಿ ಮಾಡಿದ ಪತ್ರಕರ್ತರೊಬ್ಬರನ್ನು ಪೊಲೀಸರು ಅನ್ಯಾಯವಾಗಿ ಬಂಧಿಸಿ ಪ್ರಕರಣ ದಾಖಲಿಸಿ ಜೈಲಿಗಟ್ಟಿ ಮಾಧ್ಯಮ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ಸಂಬಂಧಿತ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಮುಖ್ಯಮಂತ್ರಿಗಳು, ಸಚಿವರು ಹಾಗೂ ಗೃಹ ಸಚಿವರನ್ನು ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಆದರೆ, ಸರಕಾರವು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ತಪ್ಪಿತಸ್ಥ ಪೊಲೀಸರಾದ ರಕ್ಷಿತ್ ಗೌಡ ಮತ್ತು ಅವರೊಂದಿಗಿದ್ದ ಇತರ ಪೊಲೀಸರ ವಿರುದ್ಧ ಸರಕಾರ ಈವರೆಗೂ ಕ್ರಮ ಜರಗಿಸದೇ ಇರುವುದರಿಂದ ಅ.13ರಂದು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅಶ್ರಫ್ ತಿಳಿಸಿದರು.

ಧಾರ್ಮಿಕ ಗ್ರಂಥ ಕುರ್‌ಆನ್ ಮೌಲ್ಯ ಚ್ಯುತಿಗೊಳಿಸಲು ಪ್ರಯತ್ನಿಸಿದ ಪೊಲೀಸರಾದ ಎ.ಕೆ.ರಕ್ಷಿತ್ ಗೌಡ ಮತ್ತು ಅವರೊಟ್ಟಿಗಿದ್ದ ಇತರ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಘಟನೆಯನ್ನು ವರದಿ ಮಾಡಿದ ಪತ್ರಕರ್ತರ ವಿರುದ್ಧ ಪೊಲೀಸ್ ಪ್ರಕರಣವನ್ನು ಸರಕಾರ ತಕ್ಷಣ ಹಿಂಪಡೆಯಬೇಕು. ಪೊಲೀಸ್ ದೌರ್ಜನ್ಯದ ಸಂತ್ರಸ್ತ ಅಹ್ಮದ್ ಖುರೇಶಿ ಬಗೆಗಿನ ಸಿಒಡಿ ವರದಿಯನ್ನು ಪ್ರಕಟಿಸಬೇಕು ಎಂಬ ಬೇಡಿಕೆಗಳನ್ನು ಸಭೆಯಲ್ಲಿ ಮುಂದಿಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಪೊರೇಟರ್ ಅಝೀಝ್ ಕುದ್ರೋಳಿ, ಹಾಜಿ ಹಮೀದ್ ಕಂದಕ್, ಹಮೀದ್ ಕುದ್ರೋಳಿ, ಸಿ.ಎಂ.ಮುಸ್ತಫಾ, ಅಶ್ರಫ್ ಕಿನಾರಾ, ಮುಹಮ್ಮದ್ ಹನೀಫ್ ಯು., ಹಿದಾಯತ್ ಮಾರಿಪಳ್ಳ, ಅಹ್ಮದ್ ಬಾವ ಬಜಾಲ್, ಸಿದ್ದೀಕ್ ತಲಪಾಡಿ, ಸಾಲಿಹ್ ಬಜ್ಪೆ, ಝಾಕಿರ್ ಉಳ್ಳಾಲ್, ಸಿರಾಜ್ ಬಜ್ಪೆ, ಶರೀಫ್ ಚೊಕ್ಕಬೆಟ್ಟು, ವಿ.ಎಚ್. ಕರೀಂ, ಯು.ಕೆ.ಸೈಫುಲ್ಲಾ ತಂಙಳ್, ಮೊಯ್ದಿನ್ ಮೋನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News