ಇರಾನ್ ಪರಮಾಣು ಒಪ್ಪಂದಕ್ಕೆ ಬದ್ಧ: ಟ್ರಂಪ್‌ಗೆ ಸ್ಪಷ್ಟಪಡಿಸಿದ ಬ್ರಿಟನ್ ಪ್ರಧಾನಿ
ಲಂಡನ್, ಅ. 11: 2015ರ ಇರಾನ್ ಪರಮಾಣು ಒಪ್ಪಂದಕ್ಕೆ ಬ್ರಿಟನ್ ಬದ್ಧವಾಗಿದೆ ಎಂಬುದನ್ನು ಪ್ರಧಾನಿ ತೆರೇಸಾ ಮೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸ್ಪಷ್ಟಪಡಿಸಿದ್ದಾರೆ.
ಇರಾನ್ ಜೊತೆಗೆ ಜಾಗತಿಕ ಶಕ್ತ ದೇಶಗಳು ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಟ್ರಂಪ್ ಈಗಾಗಲೇ ಸಂದೇಹ ವ್ಯಕ್ತಪಡಿಸಿದ್ದಾರೆ. ಇರಾನ್ ವಿರುದ್ಧ ಪಾಶ್ಚಾತ್ಯ ದೇಶಗಳು ವಿಧಿಸಿರುವ ಆರ್ಥಿಕ ದಿಗ್ಬಂಧನಗಳನ್ನು ತೆರವುಗೊಳಿಸುವುದಕ್ಕೆ ಪ್ರತಿಯಾಗಿ ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂಬುದಾಗಿ ಒಪ್ಪಂದ ಹೇಳುತ್ತದೆ.
ಒಪ್ಪಂದದಿಂದ ಹಿಂದೆ ಸರಿಯುವ ಬೆದರಿಕೆಯನ್ನು ಟ್ರಂಪ್ ಆಗಾಗ ಒಡ್ಡುತ್ತಾ ಬಂದಿದ್ದಾರೆ. ಒಪ್ಪಂದದ ಬಗ್ಗೆ ಅಮೆರಿಕ ಮರು ತೀರ್ಮಾನ ಕೈಗೊಳ್ಳಲು ಸಿದ್ಧವಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಟ್ರಂಪ್ ಜೊತೆಗೆ ಫೋನ್‌ನಲ್ಲಿ ಮಾತನಾಡಿದ ತೆರೇಸಾ ಮೇ ತನ್ನ ದೇಶದ ನಿಲುವನ್ನು ವ್ಯಕ್ತಪಡಿಸಿದರು.
‘‘ಒಪ್ಪಂದದ ಬಗ್ಗೆ ಬ್ರಿಟನ್ ಹೊಂದಿರುವ ಪ್ರಬಲ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಇದು ಪ್ರಾದೇಶಿಕ ಭದ್ರತೆಗೆ ಅಗತ್ಯವಾಗಿದೆ’’ ಎಂದು ಮಂಗಳವಾರ ಸಂಜೆ ಟೆಲಿಫೋನ್‌ನಲ್ಲಿ ಮಾತುಕತೆ ನಡೆದ ಬಳಿಕ ಮೇ ಅವರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.