×
Ad

ಅ.12ರಿಂದ ರಾಷ್ಟ್ರೀಯ ವಿಚಾರ ಸಂಕಿರಣ

Update: 2017-10-11 22:17 IST

ಪುತ್ತೂರು, ಅ.11: ನಗರದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ, ವಿಶ್ವೇಶ್ವರಯ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅನ್ವಯಿಕಾ ಕೇಂದ್ರ ಹಾಗೂ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಇದರ ಸಂಯುಕ್ತ ಆಶ್ರಯದಲ್ಲಿ ’ಕರಾವಳಿ ಭಾಗದ ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ’ ಎನ್ನುವ ವಿಷಯದ ಕುರಿತು ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅಕ್ಟೋಬರ್ 12, 13 ಮತ್ತು 14 ರಂದು ಕಾಲೇಜಿನ ಕೃಷ್ಣ ಚೇತನಾ ಸಭಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದರು.

ಪುತ್ತೂರಿನಲ್ಲಿ ಬುಧವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲಾ ಜೀವರಾಶಿಗಳಿಗೆ ನೀರು ಅತೀ ಅಗತ್ಯ. ಆದರೆ ಸೂಕ್ತ ನಿರ್ವಹಣೆಯ ಕೊರತೆಯಿಂದ ನೀರಿಗಾಗಿ ಎಲ್ಲೆಡೆ ಹಾಹಾಕಾರಗಳು ಕಂಡುಬರುತ್ತಿವೆ. ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಸಾಕಷ್ಟು ಮಳೆಯಾದರೂ ಸಹ ಬೇಸಿಗೆಯಲ್ಲಿ ನೀರಿನ ಕೊರತೆ ವ್ಯಾಪಕವಾಗಿದೆ. ನೀರಿನ ಸದ್ಭಳಕೆಯ ಬಗ್ಗೆ ಸಾಕಷ್ಟು ಚಿಂತನ ಮಂಥನಗಳು ನಡೆಯುವ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ವಿಚಾರ ಸಂಕಿರಣವು ನಡೆಯಲಿದೆ ಎಂದು ಹೇಳಿದರು.

ಕರಾವಳಿ ಭಾಗದ ನೀರಿನ ಬಳಕೆ ಮತ್ತು ನಿರ್ವಹಣೆಯ ಕುರಿತು ತಜ್ಞರಾದ ಡಾ. ಜಿ.ವಿ. ಹೆಗಡೆ, ಗಣಪತಿ ಮಯ್ಯ, ಜಗದೀಶ್ ಬಾಳ ಹಾಗೂ ಭವಾನಿಶಂಕರ್ ರಾವ್ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಇದರಲ್ಲಿ ಸಂಶೋಧಕರು, ನೀರಾವರಿ ತಜ್ಞರು, ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದನ್ನು ಸಂಚಿಕೆಯ ರೂಪದಲ್ಲಿ ಪ್ರಕಟಿಸಲಾಗುತ್ತದೆ ಎಂದವರು ತಿಳಿಸಿದರು.

ಪರಿಣತ ಸಂಪನ್ಮೂಲ ವ್ಯಕ್ತಿಗಳಿಂದ ನೀರಿನ ನಿರ್ವಹಣೆ, ಅಂತರ್ಜಲ ಮಟ್ಟವನ್ನು ಏರಿಸಿ ಉಳಿಸಿಕೊಳ್ಳುವ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ. ಸಾರ್ವಜನಿಕ ಮತ್ತು ರೈತ ಸಮುದಾಯದೊಂದಿಗೆ ಪರಸ್ಪರ ಸಂವಾದ ಕಾರ್ಯಕ್ರಮವೂ ನಡೆಯಲಿದೆ.

ನೀರಿನ ಸಂಗ್ರಹಣಾ ಸಾಮರ್ಥ್ಯ, ಭೂಮಿಯ ಮೇಲ್ಮೈ ಮತ್ತು ತಳಮಟ್ಟದ ನೀರಿನ ಸಂರಕ್ಷಣೆ, ನೀರಿನ ಸಂರಕ್ಷಣೆಯ ರಚನೆಗಳು, ನದಿ ಜಲಾನಯನ ಪ್ರದೇಶದ ಒಯ್ಯುವ ಸಾಮರ್ಥ್ಯ, ನೀರು ಮತ್ತು ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆ, ಹವಾಮಾನದ ಬದಲಾವಣೆ ಮತ್ತು ಜಾಗತಿಕ ತಾಪಮಾನ, ನೀರು ಮಣ್ಣು ಮತ್ತು ಗಾಳಿಯ ಮಾಲಿನ್ಯ, ಪಶ್ಚಿಮ ಘಟ್ಟದ ಪರಿಸರ ವ್ಯವಸ್ಥೆ ಮುಂತಾದ ವಿಷಯಗಳ ಬಗ್ಗೆ ವಿಚಾರ ಸಂಕಿರಣವು ಬೆಳಕು ಚೆಲ್ಲಲಿದೆ.
ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಮೂಡಿಸುವ ದೃಷ್ಟಿಯಿಂದ ಅಕ್ಟೋಬರ್ 12ರಂದು ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಅಕ್ಟೋಬರ್ 13 ರಂದು ಬೆಳಿಗ್ಗೆ 9.30ಕ್ಕೆ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇಂಜಿನಿಯರಿಂಗ್ ಕಾಲೇಜು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್.ಪಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಅಕ್ಟೋಬರ್ 14 ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.

ಸುದ್ದಿಗೊಷ್ಟಿಯಲ್ಲಿ ಸಿವಿಲ್ ವಿಭಾಗ ಮುಖ್ಯಸ್ಥ ಡಾ.ಸಂದೀಪ್.ಜೆ.ನಾಯಕ್, ಕಾರ್ಯಕ್ರಮ ಸಂಯೋಜಕರಾದ ಪ್ರೊ.ಪ್ರಶಾಂತ್, ಪ್ರೊ. ಸುಮಂತ್. ಎ ಮತ್ತು ಮಾಧ್ಯಮ ಸಂಚಾಲಕ ಪ್ರೊ.ಆಶ್ಲೆ.ಡಿ.ಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News